ಐನಾಪುರ: ಹಿಂದೂ–ಮುಸ್ಲಿಂ ಸಮಾಜದವರು ಒಗ್ಗಟ್ಟಿನಿಂದ, ಸೌಹಾರ್ದತೆಯಿಂದ ಕಳೆದ 18 ವರ್ಷಗಳಿಂದ ನಾಡಹಬ್ಬ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದೆವೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಜಯಪಾಲ ಕೊಕಟನೂರ ಹೇಳಿದರು.
ಅವರು ಪಟ್ಟಣದ ಓಂ ಶಕ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸೋಮವಾರ (ದಿ. 19) ದುರ್ಗಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಾ. ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಯಾವುದೇ ಜಾತಿ-ಭೇದವಿಲ್ಲದೆ ಎಲ್ಲ ಸಮಾಜದವರ ಸಹಕಾರದೊಂದಿಗೆ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ದೇವಸ್ಥಾನ ಸಮಿತಿಯ ಸದಸ್ಯ ಸುರೇಶ ಕಾಗಲಿ ಮಾತನಾಡಿ, ದೇಶದಲ್ಲಿ ಜಾತಿ-ಜಾತಿಗಳ ನಡುವೆ ವೈಷಮ್ಯ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಐನಾಪುರದಲ್ಲಿ ನವರಾತ್ರಿ ಉತ್ಸವವನ್ನು ಸೌಹಾರ್ದತೆಯಿಂದ ಆಚರಿಸಲಾಗುತ್ತಿದೆ. ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲ ವರ್ಗದ ಜನರು ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಉತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ, ದಂಪತಿ ಪೂಜೆ, ಬಾಲ ಮುತ್ತೈದೆಯರಿಗೆ ಪೂಜೆ ಹಾಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಮಿತಿಯ ಸದಸ್ಯರಾದ ಕಾಶಿಮ ಮುಲ್ಲಾ ಹಾಗೂ ರಫೀಕ್ ನದಾಫ ಮಾತನಾಡಿ, ಹಲವು ವರ್ಷಗಳಿಂದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ–ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲ ಸಮಾಜದವರು ಭಕ್ತಿ-ಭಾವದಿಂದ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಾಗಿ ದೇವಿಯ ಸೇವೆ ಸಲ್ಲಿಸುತ್ತಿದ್ದೆವೆ. ದೇವಿಯ ಕೃಪೆಯಿಂದ ಎಲ್ಲರಿಗೂ ಒಳಿತಾಗಿದೆ ಎಂದರು.
ಸಮಿತಿಯ ಸದಸ್ಯ ಅಣ್ಣಪ್ಪ ಖಟಾಂವಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸದಾಶಿವ ಮಡಿವಾಳ, ಸುನೀಲ ಡೊಂಗರೆ, ರಾಜು ಜಕಾತೆ, ಗುಂಡು ಝಂಜರವಾಡ, ಕಾಶಿಮ ಮುಲ್ಲಾ, ಸಂತೋಷ ಬೋಗಾರ, ವಸಂತ ಸೂರ್ಯವಂಶಿ, ಅಣ್ಣಪ್ಪ ಲೊಂಡೆ, ಮಹಾವೀರ ಸವದತ್ತಿ, ರಫೀಕ್ ನದಾಫ, ಜಯಶ್ರೀ ಅನೀಲ ಕಾರ್ಚಿ, ಸುನೀತಾ ಪ್ರಕಾಶ ಘಾಟಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಮಂಜುಳಾ ಜಕಾತೆ, ಶ್ವೇತಾ ಕುಂಬಾರ, ಕಲಾವತಿ ಡೊಂಗರೆ, ನಂದಿನಿ ಜಕಾತೆ, ಪದ್ಮಾವತಿ ಅಡಿಶೇರಿ ಹಾಗೂ ವೈಷ್ಣವಿ ಅಡಿಶೇರಿ ನೆರವೇರಿಸಿದರು. ಅರ್ಚಕ ಹಣಮಂತ ಅಡಿಶೇರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.