ಬಳ್ಳಾರಿ, ಅ.12: ಈ ಬಾರಿ ಅಕ್ಟೋಬರ್ 25ರಂದು ತಮ್ಮ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿರುವ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆಯಾಗುವವರೆಗೆ ಯಾವುದೇ ರೀತಿಯ ಜನ್ಮದಿನ ಆಚರಣೆ ಹಾಗೂ ಶುಭಾಶಯ ಕಾರ್ಯಕ್ರಮಗಳನ್ನು ನಡೆಸದಂತೆ ಮಿತ್ರರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರತಿ ವರ್ಷ ತಮ್ಮ ಜನ್ಮದಿನದ ಅಂಗವಾಗಿ ಸುಮಾರು 50ರಿಂದ 60 ಸಾವಿರ ಜನರಿಗೆ ಭೋಜನದ ವ್ಯವಸ್ಥೆ ಮಾಡುವ ಮೂಲಕ ಸಂತೋಷ ಹಂಚಿಕೊಳ್ಳುತ್ತಿದ್ದೆವು ಎಂದು ತಿಳಿಸಿದ್ದಾರೆ.
ಆದರೆ, ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ಪವಿತ್ರ ಪ್ರತಿಮೆಯ ಉದ್ಘಾಟನೆ ಇನ್ನೂ ಬಾಕಿ ಇರುವುದರಿಂದ ಜನ್ಮದಿನದ ಆಚರಣೆ ಹಾಗೂ ಭೋಜನಕೂಟ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ.
ಮಹಾನ್ ಋಷಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆಯಾಗುವ ಮುನ್ನ ತಮ್ಮ ಜನ್ಮದಿನವನ್ನು ಆಚರಿಸುವುದು ಸೂಕ್ತವೆನಿಸುವುದಿಲ್ಲ. ಹೀಗಾಗಿ ಪ್ರತಿಮೆ ಉದ್ಘಾಟನೆಯಾಗುವವರೆಗೆ ತಮ್ಮ ಹೆಸರಿನಲ್ಲಿ ಯಾವುದೇ ಶುಭಾಶಯ ಕಾರ್ಯಕ್ರಮ ಅಥವಾ ಇತರ ಆಚರಣೆಗಳನ್ನು ಮಾಡಬಾರದು ಎಂದು ಅವರು ಕೋರಿದ್ದಾರೆ.
ಸಾರ್ವಜನಿಕ ಕಾರ್ಯಗಳಿಗೆ ಆದ್ಯತೆ ನೀಡುವುದು ತಮ್ಮ ಆಶಯವಾಗಿದ್ದು, ವಾಲ್ಮೀಕಿ ಪ್ರತಿಮೆ ಉದ್ಘಾಟನೆಯ ನಂತರ ಸೂಕ್ತ ಸಮಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ವಿನಯಪೂರ್ಣ ಮನವಿಯನ್ನು ಅರ್ಥಮಾಡಿಕೊಂಡು ಎಲ್ಲರೂ ಸಹಕರಿಸಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಮನವಿ ಮಾಡಿದ್ದಾರೆ.