ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು (Tax) ಇಳಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಖಡಕ್గా ಹೇಳಿದ್ದಾರೆ.
ಪೆಟ್ರೋಲ್-ಡೀಸೆಲ್ ದರ ಏರಿಕೆ (Petrol – Diesel Price Hike) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡುತ್ತದೆಯೇ ಎಂಬ ಪ್ರಶ್ನೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಬೆಲೆ ಹೆಚ್ಚಿಸುವುದು ಕೇಂದ್ರ ಸರ್ಕಾರ, ಕಡಿಮೆ ಮಾಡಬೇಕೆಂದು ಮಾತ್ರ ರಾಜ್ಯವನ್ನು ಕೇಳುತ್ತೀರಾ? ಕೇಂದ್ರದ ವಿರುದ್ಧ ಯಾಕೆ ಪ್ರಶ್ನೆ ಕೇಳುವುದಿಲ್ಲ ಎಂದು ತಿರುಗೇಟು ನೀಡಿದರು.
ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಮನಮೋಹನ್ ಸಿಂಗ್ ಅವಧಿಯಲ್ಲಿ ಪೆಟ್ರೋಲ್ 70 ರೂ., ಡೀಸೆಲ್ 48 ರೂ. ಇತ್ತು. ಅಡುಗೆ ಅನಿಲದ ದರವೂ 414 ರೂ. ಇತ್ತು. ಈಗಿನ ಬೆಲೆಗಳನ್ನು ನೋಡಿದರೆ ಯಾರು ಹೆಚ್ಚಳ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ರಾಜ್ಯದ ಜನರಿಗೆ ಸರ್ಕಾರ ನೆರವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ಪ್ರಶ್ನೆ ಕೇಳದೇ, ರಾಜ್ಯ ಸರ್ಕಾರಕ್ಕೆ ಮಾತ್ರ ತೆರಿಗೆ ಇಳಿಸಬೇಕು ಎಂದು ಕೇಳುವುದು ಸರಿಯಲ್ಲ. ನಿಮ್ಮ ಪ್ರಶ್ನೆಗಳಲ್ಲೇ ಕೇಂದ್ರದ ಪರ ನಿಲುವು ಕಾಣುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳ ಮೇಲೂ ಅಸಮಾಧಾನ ವ್ಯಕ್ತಪಡಿಸಿದರು.