ಬೆಂಗಳೂರು: ಕೊನೆಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಡಿ ಎನ್ ಜೀವರಾಜ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಪ್ರಮಾಣವಚನಕ್ಕೆ ಸಭಾಧ್ಯಕ್ಷ ಯುಟಿ ಖಾದರ್ ಸಮಯ ನಿಗದಿಪಡಿಸಿದ್ದಾರೆ.
ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಯ ನಂತರ ಉಂಟಾದ ರಾಜಕೀಯ ಗದ್ದಲದ ನಡುವೆ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಬಿಜೆಪಿ ವಿಳಂಬದ ಆರೋಪ ಮಾಡಿತ್ತು. ಸ್ಪೀಕರ್ ಲಭ್ಯವಿಲ್ಲದಿದ್ದರೆ ತಾವೇ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಬೇಕೆಂದು ಬಿಜೆಪಿ ಪ್ರತಿನಿಧಿ ಮಂಡಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಕೊನೆಗೂ ಸಭಾಧ್ಯಕ್ಷರು ಸಮಯ ನಿಗದಿಪಡಿಸಿದ್ದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಜೀವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಜೀವರಾಜ್ ಅಂಚೆ ಮತಗಳ ಮರುಎಣಿಕೆಗಾಗಿ ನ್ಯಾಯಾಲಯದ ಮೊರೆಹೋಗಿದ್ದರು. ಕಳೆದ ವಾರಾಂತ್ಯ ಹೈಕೋರ್ಟ್ ನಿರ್ದೇಶನದಂತೆ ನಡೆದ ಮರುಎಣಿಕೆಯಲ್ಲಿ 52 ಮತಗಳ ಅಂತರದಿಂದ ಜಯಗಳಿಸಿ ಶಾಸಕರಾಗಿ ಘೋಷಿಸಲ್ಪಟ್ಟಿದ್ದಾರೆ.