ಸಿರುಗುಪ್ಪ, ಅ.08: ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ವಿದ್ಯಾರ್ಥಿಗಳಿಗೆ 2026ರ ನಿಯಮಾವಳಿಗಳನ್ವಯ ಕಸವನ್ನು ನಾಲ್ಕು ವಿಧಗಳಾಗಿ ವಿಂಗಡಿಸುವ ವಿಧಾನ, ವಿವಿಧ ರೀತಿಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಕ್ರಮ ಹಾಗೂ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಪ್ರಕ್ರಿಯೆಯ ಕುರಿತು ವಿವರಿಸಲಾಯಿತು.
ನಗರದ ಎಸ್.ಇ.ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ, ತ್ಯಾಜ್ಯ ವಿಂಗಡಣೆ ಹಾಗೂ ವೈಜ್ಞಾನಿಕ ನಿರ್ವಹಣೆಯ ಕುರಿತು ಮಾಹಿತಿ ಪಡೆದರು.
ಅಲ್ಲದೆ, ಹಸಿ ತ್ಯಾಜ್ಯದಿಂದ ಏರೆಹುಳ ಗೊಬ್ಬರ ತಯಾರಿಸುವ ವಿಧಾನ, ಅದರ ಉಪಯೋಗ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಇದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಾಯಿತು. ಎಂ.ಆರ್.ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಘಟಕದಲ್ಲಿ ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹಿಸಿ, ವಿಂಗಡಿಸಿ ಸಂಸ್ಕರಿಸುವ ಕಾರ್ಯವಿಧಾನದ ಬಗ್ಗೆಯೂ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸುನಂದಾ ಜೆ. ಹಾಗೂ ಅನ್ನಪೂರ್ಣ ಬಿ. ಅವರು ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಂಗಡಣೆ, ಸಂಸ್ಕರಣೆ ಮತ್ತು ನಿರ್ವಹಣೆಯ ವಿವಿಧ ಹಂತಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಘಟಕದ ಕಾರ್ಯವಿಧಾನವನ್ನು ವೀಕ್ಷಿಸಿ, ತ್ಯಾಜ್ಯ ನಿರ್ವಹಣೆಯ ಕುರಿತು ಹಲವು ಮಾಹಿತಿಗಳನ್ನು ಪಡೆದುಕೊಂಡರು.