ಬಳ್ಳಾರಿ. ಸೆ. 25: : ಮೈಸೂರು ಜಿಲ್ಲೆಯ ಟಿ ನರಸೀಪುರ ಪಟ್ಟಣದಲ್ಲಿ ಗಣಪತಿ ಹಬ್ಬದ ವೇಳೆ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಹಾಗೂ ಪತ್ರಕರ್ತ ಪ್ರತಾಪ್ ಸಿಂಹ ದಲಿತರನ್ನು ಮತ್ತು ದಲಿತ ಸಂಘರ್ಷ ಸಮಿತಿ ಸಂಘಟನೆಯನ್ನು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರನ್ನು ಕುರಿತು ಹಗುರವಾದ ಹೇಳಿಕೆಯನ್ನು ನೀಡಿ ಅವಮಾನಿಸಿದ್ದಾರೆ ಅವರು ರಾಜ್ಯದ ಇಡೀ ದಲಿತ ಸಮುದಾಯವನ್ನು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಮತ್ತು ರಾಜ್ಯ ಸರ್ಕಾರ ಅವರ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿಯ ಡಿಜಿ ಸಾಗರ್ ಬಣದ ಜಿಲ್ಲಾ ಸಂಚಾಲಕರಾದ ಈ ಮಾನಯ್ಯ ಆಗ್ರಹಿಸಿದರು.
ಅವರು ಇಂದು ನಗರದ ಮರ್ಚಾಡ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ದಲಿತರು ಕೇವಲ ನೀಲಿ ಸಾಲುಗಳನ್ನು ಹಾಕಿಕೊಂಡು ಬರುವುದು ಒಂದು ಫ್ಯಾಶನ್ ಮಾಡಿಕೊಂಡಿದ್ದಾರೆ ಅವರು ಅಂಬೇಡ್ಕರ್ ಕುರಿತಾದ ಚಿಂತನೆಗಳನ್ನು ಸರಿಯಾಗಿ ಓದಿಕೊಳ್ಳಲಿ ಎಂದು ಮಾತನ್ನು ಆಡಿದ್ದಾರೆ, ದಲಿತ ಸಂಘರ್ಷ ಸಮಿತಿಯ ನಾವು ಹಲವು ದಶಕಗಳಿಂದ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಓದಿಕೊಂಡಿದ್ದೇವೆ ಸಿಂಹ ಈ ಕುರಿತು ನಮಗೆ ತಿಳಿಸುವ ಅಗತ್ಯವಿಲ್ಲ ಅವರಿಗೆ ದಲಿತರ ಮತ್ತು ಅಂಬೇಡ್ಕರ್ ಅವರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ರಾಜ್ಯದ ಇಡೀ ದಲಿತ ಸಮುದಾಯ ಮತ್ತು ದಲಿತ ಸಂಘರ್ಷ ಸಮಿತಿ ಸಂಘಟನೆಯ ಪದಾಧಿಕಾರಿಗಳ ಕ್ಷಮೆಯನ್ನು ಸಾರ್ವಜನಿಕವಾಗಿ ಕೋರಬೇಕೆಂದು ಒತ್ತಾಯಿಸಿದರು.
ಟಿ. ನರಸೀಪುರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ನೀಲಿ ಶಾಲಿನ ಕುರಿತು ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಗಳು ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಅವರು ಆರೋಪಿಸಿದರು. ಇಂತಹ ಹೇಳಿಕೆಗಳು ಸಮಾಜದಲ್ಲಿ ಜಾತಿ ಆಧಾರಿತ ಸಂಘರ್ಷಕ್ಕೆ ಕಾರಣವಾಗಬಾರದು. ಸೌಹಾರ್ದಯುತ ವಾತಾವರಣವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ಹೋರಾಟದ ಇತಿಹಾಸವನ್ನು ಅರ್ಥಮಾಡಿಕೊಂಡು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಬಗ್ಗೆ ಜವಾಬ್ದಾರಿಯುತವಾಗಿ ಮಾತನಾಡಬೇಕು. ದಲಿತರ ಕುರಿತು ನೀಡಿರುವ ಹೇಳಿಕೆಗಳನ್ನು ಪ್ರತಾಪ್ ಸಿಂಹ ಅವರು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿತು.
ಸಮಾಜದಲ್ಲಿ ಜಾತಿ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವಂತಹ ಹೇಳಿಕೆಗಳು ಮತ್ತು ನಡೆಗಳ ಬಗ್ಗೆ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಪ್ರಜ್ಞಾವಂತ ನಾಗರಿಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮಾನಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಛಲುವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನರಸಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ದೇವದಾಸ ಕೆ., ಎಚ್. ಆಂಜನೇಯ್ಯ, ಕೊಳಗಲ್ಲು ಮಲ್ಲಯ್ಯ, ಮುಖಂಡರಾದ ಬಿ. ರಮೇಶ್, ಟಿ.ಎಂ. ಎರಿಸ್ವಾಮಿ, ಬೆಳಗಲ್ ಹುಲುಗಪ್ಪ, ಎಚ್. ಮಲ್ಲಪ್ಪ, ಶಂಕರ್ ಬಾಪೂಜಿ ನಗರ, ಎರಿಸ್ವಾಮಿ ಹಲಕುಂದಿ, ಭೀಮಶಂಕರ, ದುರ್ಗಾದಾಸ್, ಹನುಮಂತಪ್ಪ ಎತ್ತಿನಬೂದಿಹಾಳ್, ಶಿವು ಅಸುಂಡಿ, ಲಕ್ಷ್ಮಣ ಬಂಡಿಹಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.