ಬೆಂಗಳೂರು: ಸೈಬರ್ ವಂಚಕರ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಬಿ.ಟೆಕ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ಒಡಿಶಾ ಮೂಲದ ಚಿನ್ಮಯ್ ಪ್ರಸಾದ್ ಸಾಹೋ ಕಾಣೆಯಾಗಿದ್ದು, ಉದ್ಯೋಗದ ಹುಡುಕಾಟಕ್ಕಾಗಿ ತನ್ನ ಗೆಳತಿಯೊಂದಿಗೆ ಬೆಂಗಳೂರಿಗೆ ಬಂದಿದ್ದನು. ಇಬ್ಬರೂ ಒಟ್ಟಿಗೆ ವಾಸವಾಗಿದ್ದ ವೇಳೆ, ಕೆಲ ದಿನಗಳ ಹಿಂದೆ ಚಿನ್ಮಯ್ ಮೊಬೈಲ್‌ಗೆ ಅವನ ಖಾಸಗಿ ಫೋಟೋಗಳು ತಲುಪಿದ್ದು, ಅದನ್ನು ಆಧರಿಸಿ ಸೈಬರ್ ವಂಚಕರು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದರು. “ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ” ಎಂಬ ಬೆದರಿಕೆ ಯುವಕನನ್ನು ತೀವ್ರ ಆತಂಕಕ್ಕೆ ತಳ್ಳಿತ್ತು. ಈ ಒತ್ತಡವನ್ನು ತಾಳಲಾರದೆ ಏಪ್ರಿಲ್ 15ರಂದು ಕಸ ಹಾಕಲು ಹೊರಟ ಚಿನ್ಮಯ್ ಮನೆಗೆ ಮರಳದೇ ನಾಪತ್ತೆಯಾಗಿದ್ದಾನೆ. ಈ ಘಟನೆ ಕಿಡ್ನ್ಯಾಪ್‌ನೋ ಅಥವಾ ಸ್ವಯಂ ನಾಪತ್ತೆಯೋ ಎಂಬ ದಿಕ್ಕಿನಲ್ಲಿ ಹುಳಿಮಾವು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.