ನೇಸರಗಿ: ಮತ್ತಿಕೊಪ್ಪದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ ೨೨.೦೯.೨೦೨೬ ರಂದು ಬೀಜ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಬಿ. ಆರ್. ಪಾಟೀಲ ಮಾತನಾಡಿ, ಪ್ರಸ್ತುತ ಕೃಷಿ ವ್ಯವಸ್ಥೆಯಲ್ಲಿ ಗುಣಮಟ್ಟದ ಬೀಜಗಳ ಲಭ್ಯತೆಯಿಲ್ಲದ ಕಾರಣ ವ್ಯವಸಾಯದಲ್ಲಿ ಕಡಿಮೆ ಇಳುವರಿಯಿಂದಾಗಿ ರೈತ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾನೆ. ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆಯಿಂದ ರೈತನು ಉತ್ತಮ ಇಳುವರಿ ಹಾಗೂ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಹಿಂಗಾರು ಹಂಗಾಮು ಪ್ರಾರಂಭವಾಗಲಿದ್ದು, ಗುಣಮಟ್ಟ ಬೀಜ ರೈತರಿಗೆ ದೊರೆಯುವಂತೆ ಮಾಡುವುದೇ ಕೆವಿಕೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಮುಂಚೂಣಿಯಲ್ಲಿದೆ. ಈ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಉತ್ಪಾದಿಸಿದ ಕಡಲೆ ಬೆಳೆಯ ಬಿಜಿಡಿ ೧೧೧-೧ ತಳಿ, ಹಿಂಗಾರು ಜೋಳದ ಎಸ್ಪಿವಿ-೨೨೧೭ ತಳಿ, ನೀರಾವರಿ ಗೋದಿ ಯುಎಎಸ್-೩೩೪, ಎಮ್ಎಸಿಎಸ್-೬೪೭೮ ತಳಿಗಳು ಮತ್ತು ಕುಸುಬೆ ಅಣ್ಣಿಗೇರಿ-೨೦೨೦ ತಳಿ ಬೀಜಗಳನ್ನು ರೈತರಿಗೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ರೈತ ಪರ ಕಾಳಜಿ, ಕೃಷಿ ಬೆಳವಣಿಗೆ ಆಗಬೇಕು ಆ ಮೂಲಕ ರೈತರ ಆರ್ಥಿಕತೆ, ಬದುಕು ಉತ್ತಮಗೊಳ್ಳಬೇಕೆಂಬ ಆಶಯದ ಫಲವಾಗಿ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರವು ಸ್ಥಾಪನೆಗೊಂಡಿದ್ದು, ಕೃಷಿ ವಿಜ್ಞಾನ ಕೇಂದ್ರವು ಅವರ ಕನಸಿನ ಕೂಸಾಗಿದೆ ಎಂದರು.
ಬೀಜ ವಿತರಣಾ ಕಾರ್ಯಕ್ರಮದಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶ್ರೀ ಪ್ರವಣೀ ಬಾಗೇವಾಡಿಯವರು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ಭಾರತ ಸರ್ಕಾರದ ಅನುದಾನದಡಿದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬೀಜ ಪೂರೈಕೆ ಹಾಗೂ ಅನೇಕ ತಂತ್ರಜ್ಞಾನದ ವರ್ಗಾವಣೆಯಿಂದ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ. ರೈತರು ಈ ಸಂಸ್ಥೆಯಲ್ಲಿರುವ ಅನುಭವಿ ವಿಜ್ಞಾನಿಗಳಿಂದ ತಂತ್ರಜ್ಞಾನದ ಮಾಹಿತಿ, ಬೀಜ ಹಾಗೂ ಇನ್ನಿತರ ಅನೇಕ ಪರಿಕರಗಳನ್ನು ಸಕಾಲಕ್ಕೆ ಪಡೆದು, ಅಧಿಕ ಆದಾಯ ಪಡೆಯಲು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ಉತ್ಪಾದಿಸುತ್ತಿರುವ ಬೀಜಗಳು ಉತ್ತಮ ಗುಣಮಟ್ಟ ಹೊಂದಿದ್ದು ರೈತರು ಶಿಫಾರಸ್ಸಿನಂತೆ ವ್ಯವಸಾಯ ಮಾಡಿ ಅಧಿಕ ಇಳುವರಿ ಪಡೆಯಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೆವಿಕೆಯ ಸಿಬ್ಬಂದಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ವಿನೋದ ಕೋಚಿ ಹಾಗೂ ಬಸವರಾಜ ಅಮ್ಮಿನಬಾವಿ ಉಪಸ್ಥಿತರಿದ್ದರು.