ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಚುನಾವಣೆಯಲ್ಲಿ (Election) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ 15 ಮತಗಟ್ಟೆಗಳಲ್ಲಿ ಮರು ಮತದಾನ (Repolling) ಆರಂಭವಾಗಿದೆ. ಮಘ್ರಹಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದ 11 ಮತಗಟ್ಟೆಗಳು ಹಾಗೂ ಡೈಮಂಡ್ ಹಾರ್ಬರ್‌ನ ನಾಲ್ಕು ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ.
ಈ ಕ್ಷೇತ್ರಗಳಲ್ಲಿ ಏ.29 ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಮತದಾನದ ಬಳಿಕ ಚುನಾವಣಾ ಆಯೋಗಕ್ಕೆ (EC) ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆಯೋಗ ಮುಂದಾಗಿದೆ.
ಈ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (EVM) ದೋಷ, ಮತಗಟ್ಟೆ ವಶಪಡಿಸಿಕೊಳ್ಳುವಿಕೆ, ಬೆದರಿಕೆ ಹಾಗೂ ಮತದಾನದ ಗೌಪ್ಯತೆ ಉಲ್ಲಂಘನೆ ಸೇರಿದಂತೆ ವಿವಿಧ ಅಕ್ರಮಗಳ ಆರೋಪಗಳು ಕೇಳಿಬಂದಿದ್ದವು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮತಗಟ್ಟೆ ಏಜೆಂಟ್‌ಗಳು ಹಾಗೂ ವೀಕ್ಷಕರು ಮರು ಮತದಾನಕ್ಕೆ ಒತ್ತಾಯಿಸಿದ್ದರು.
ಡೈಮಂಡ್ ಹಾರ್ಬರ್‌ನ ಫಾಲ್ಟಾ ಕ್ಷೇತ್ರದಲ್ಲಿ ಮರು ಮತದಾನದ ಕುರಿತು ಇಂದು (ಮೇ 2) ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಕ್ಷೇತ್ರದ ವರದಿ ಇನ್ನೂ ಬಾಕಿಯಿದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ನಾಯಕ ಕುನಾಲ್ ಘೋಷ್, ಬಿಜೆಪಿ ಭಾರಿ ಅಂತರದಿಂದ ಸೋಲಲಿದೆ ಎಂದು ತಿಳಿದು ಡೈಮಂಡ್ ಹಾರ್ಬರ್ ಮತ್ತು ಮಘ್ರಹಟ್‌ನಲ್ಲಿ ಮರು ಮತದಾನಕ್ಕೆ ಒತ್ತಾಯಿಸುತ್ತಿದೆ. ಜನಮತ ಬಿಜೆಪಿ ವಿರುದ್ಧವಾಗಿದೆ ಮತ್ತು ಅದೇ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಟಿಎಂಸಿಗೆ ಅನುಕೂಲವಾಗುವ ರೀತಿಯಲ್ಲಿ ಹಲವು ಬೂತ್‌ಗಳಲ್ಲಿ ಅಕ್ರಮ ನಡೆದಿದೆ. ಚುನಾವಣಾ ಆಯೋಗದ ಮರು ಮತದಾನ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.