ಧಾರವಾಡ: ಖಾ ಖ್ಯಾತ ಮನೋವೈದ್ಯ ಮನೋವಿಜ್ಞಾನ ಲೇಖಕ ಡಾ. ಆನಂದ ಪಾಂಡುರಂಗಿ ಅವರು ಗುರುವಾರ ಬೆಳಗ್ಗೆ ನಿಧನ ಹೊಂದಿದರು. ಆನಂದ ಅವರಿಗೆ 72 ವರ್ಷ ವಯಸ್ಸಾಗಿತ್ತು.
ಸೆ. 22ರಂದು ಹೃದಯಾಘಾಕ್ಕೊಳಗಾಗಿದ್ದ ಡಾ. ಆನಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದು, ಆನಂದ ಅವರು ಪತ್ನಿ ಅನುಪಮಾ, ಪುತ್ರ ಡಾ. ಆದಿತ್ಯ ಪಾಂಡುರಂಗಿ, ಸೊಸೆ ಡಾ. ಸ್ವಪ್ನಾ ಅವರನ್ನು ಅಗಲಿದ್ದಾರೆ.
ಮನೋವಿಜ್ಞಾನ ಲೇಖಕರೂ ಆಗಿದ್ದ ಇವರು ಉತ್ತಮ ಭಾಷಣಕಾರರೂ ಆಗಿದ್ದರಲ್ಲದೇ ವಿವಿಧ ಪತ್ರಿಕೆಗಳ ಅಂಕಣಕಾರರೂ ಆಗಿದ್ದರು. ಮನೋವೈದ್ಯಕೀಯ ಚಿಕಿತ್ಸಕರಾಗಿದ್ದ ಅವರ ಬಳಿ ರಾಜ್ಯದ ಹಲವು ಜಿಲ್ಲೆಗಳ ಜನ ಚಿಕಿತ್ಸೆಗೆ ಬರುತ್ತಿದ್ದರು. ಸಪ್ತಾಪುರದ ಮಿಚಿಗನ್ ಕಾಂಪೌಂಡ್ನ ಶಾಂತಿ ಧಾಮದಲ್ಲಿ ನಿತ್ಯ ನೂರಾರು ಜನರಿಗೆ ಮನೋವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದರು.
ಆನಂದ ಅವರು ಕೇವಲ ಆಸ್ಪತ್ರೆಗೆ ಸೀಮಿತವಾಗದೆ, ಜನಮಾನಸದ ವೈದ್ಯರಾಗಿ ಅಪಾರ ಸೇವೆ ಸಲ್ಲಿಸಿದ್ದರು. ನಾಡಿನ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ
ಅವರು, ಸಾವಿರಾರು ಮನೋರೋಗಿಗಳಿಗೆ ಜೀವದಾನ ನೀಡುವುದರ ಜೊತೆಗೆ ಅವರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದ್ದರು. ವೈದ್ಯಕೀಯ ವೃತ್ತಿಯನ್ನು ಕೇವಲ ಸೇವೆಯಾಗಿ ಸ್ವೀಕರಿಸಿದ್ದ ಅವರ ಮಾನವೀಯ ಗುಣಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು.
ಇವರ ಅಸಾಧಾರಣ ಸಮಾಜಮುಖಿ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಹಾಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ 'ಡಾ. ಬಿ.ಸಿ. ರಾಯ್ ಪ್ರಶಸ್ತಿ' ನೀಡಿಗೌರವಿಸಿತ್ತು.
ಪ್ರೇರಣಾದಾಯಿ ವಾಗ್ನಿಗಳು ಹಾಗೂ ಪ್ರಸಿದ್ದ ಅಂಕಣಕಾರರಾದ ಡಾ. ಆನಂದ ಪಾಂಡುರಂಗಿ ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಎಂ.ನಾಗರಾಜ, ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವ ಶಂಕರಪಾಟೀಲ ಮುನೇಕೊಪ್ಪ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತಪ್ರಸಾದ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.