ಬಾಗಲಕೋಟೆ : ಸೆಪ್ಟೆಂಬರ ೨೫ ಶಾಲಾ ಮಕ್ಕಳ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್ಗಳನ್ನು ಸಮರ್ಪಕವಾಗಿ ಓಡಿಸಬೇಕು. ಉಚಿತ ಪ್ರಯಾಣ ಸೌಲಭ್ಯವಿದೆ ಎಂಬ ಕಾರಣಕ್ಕೆ ಶಾಲಾ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್ಗಳ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರೊಂದಿಗೆ ಬಸ್ ಸಿಬ್ಬಂದಿ ನಿರ್ಲಕ್ಷ್ಯ ಅಥವಾ ಅಸೌಜನ್ಯದ ಮಾತುಗಳನ್ನು ಆಡಬಾರದು. ಈ ಕುರಿತು ದೂರುಗಳು ಬಂದಲ್ಲಿ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಕ್ತಿ ಯೋಜನೆಯಿಂದ ೨.೭೧ ಲಕ್ಷದಿಂದ ೩.೦೬ ಲಕ್ಷದವರೆಗೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಸಾರಿಗೆ ಸಂಸ್ಥೆಯ ಒಟ್ಟು ಆದಾಯದಲ್ಲಿ ಶಕ್ತಿ ಯೋಜನೆಯ ಪಾಲು ಶೇ.೫೭ರಷ್ಟಿದೆ ಎಂಬ ಮಾಹಿತಿಯನ್ನು ಪಡೆಯಲಾಯಿತು.
ಗೃಹಲಕ್ಷ್ಮೀ ಯೋಜನೆಯಡಿ ಐಟಿ ಹಾಗೂ ಜಿಎಸ್ಟಿ ಪಾವತಿದಾರರೆಂದು ತಿರಸ್ಕೃತಗೊಂಡ ೪,೨೨೮ ಫಲಾನುಭವಿಗಳ ಪೈಕಿ ೭೦೨ ಮಂದಿ ತಾವು ಐಟಿ, ಜಿಎಸ್ಟಿ ಪಾವತಿದಾರರಲ್ಲ ಎಂದು ಪತ್ರ ಸಲ್ಲಿಸಿದ್ದಾರೆ. ಈ ದಾಖಲೆಗಳನ್ನು ಲಗತ್ತಿಸಿ ಅಗತ್ಯ ಕ್ರಮಕ್ಕಾಗಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದ ೧.೪೮ ಕೋಟಿ ರೂ.ಗಳ ಮೊತ್ತವನ್ನು ಸರ್ಕಾರಕ್ಕೆ ಮರಳಿ ಜಮೆ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಬಯೋಮೆಟ್ರಿಕ್ ಪರಿಶೀಲನಾ ಕಾರ್ಯವನ್ನು ಪ್ರಾರಂಭಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ನಿಗದಿತ ಪ್ರಮಾಣದಲ್ಲಿ ಪಡಿತರಧಾನ್ಯವನ್ನು ವಿತರಿಸಲಾಗುತ್ತಿದೆ. ಪಡಿತರ ಚೀಟಿದಾರರ ಇ-ಕೆವೈಸಿ ಕಾರ್ಯ ಪ್ರಗತಿಯಲ್ಲಿದ್ದು, ಇ-ಕೆವೈಸಿಗೆ ಅಕ್ಟೋಬರ ೨೦ ವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಭೆಗೆ ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ಮರುಪರಿಶೀಲನಾ ಕಾರ್ಯ ಶೇ.೯೧ ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರೆ, ಯುವನಿಧಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಲಾಯಿತು. ಅಲ್ಲದೇ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಫಲಾನುಭವಿಗಳ ಸ್ಥಿತಿ ಹಾಗೂ ಎದುರಾಗಿರುವ ಸಮಸ್ಯೆಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾದ್ಯಕ್ಷ ಶಂಕರಪ್ಪ ನೇಗಲಿ ಸೇರಿದಂತೆ ಆಯಾ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರತ ಜೋಡೋ : ಆಪ್ಲೈನ್ ಮೂಲಕ ನೋಂದಣಿ ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಭಾರತ ಜೋಡೋ ಯುವ ಸಂಘಗಳ ಸ್ಥಾಪನೆಗೆ ಈಗಾಗಲೇ ಆನ್ಲೈನ್ ಮೂಲಕ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಇವರನ್ನು ಹೊರತುಪಡಿಸಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಆಪ್ಲೈನ್ನಲ್ಲಿ ನಿಗದಿತ ನಮೂನೆಗಳಲ್ಲಿ ತಲಾ ೧೦೦ ಜನರ ನೋಂದಣಿಗೆ ಕ್ರಮಕೈಗೊಳ್ಳುವಂತೆ ತಾಲೂಕಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಯಿತು. ತಾಲೂಕಾ ಅಧ್ಯಕ್ಷರು ಗ್ರಾ.ಪಂ ಮಟ್ಟದ ಅಧಿಕಾರಿಗಳ ಸಹಕಾರ ಪಡೆದುಕೊಂಡು ನೋಂದಣಿಗೆ ಕ್ರಮಕೈಗೊಳ್ಳಬೇಕು.