ನವದೆಹಲಿ/ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಹುದ್ದೆಗೆ ಡಿಸಿಎಂ D. K. Shivakumar ಅವರ ಹೆಸರು ಬಹುತೇಕ ಫೈನಲ್ ಆಗಿದೆ. ಈ ಬೆಳವಣಿಗೆಯ ನಡುವೆ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೂ ಕಾಂಗ್ರೆಸ್ ಹೈಕಮಾಂಡ್ ಉತ್ತರ ಹುಡುಕಿದೆ.
ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ ಖಾಲಿಯಾಗುವ ಸ್ಥಾನಕ್ಕೆ ಸಚಿವ Satish Jarkiholi ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸತೀಶ್ ಜಾರಕಿಹೊಳಿ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ K. C. Venugopal ಈಗಾಗಲೇ ಚರ್ಚೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಜೊತೆಯಲ್ಲೇ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನೂ ಉಳಿಸಿಕೊಳ್ಳುವ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ Randeep Singh Surjewala ಅವರೊಂದಿಗೆ ನಡೆದ ಮಾತುಕತೆಯಲ್ಲೂ ಸತೀಶ್ ಜಾರಕಿಹೊಳಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಹೈಕಮಾಂಡ್ ಈ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡುತ್ತದೆಯೇ ಎನ್ನುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.