ರನ್ನ ಬೆಳಗಲಿ, ಸೆ.೨೩: ಪಟ್ಟಣದ ಪಂಚಾಯಿತಿ ಕಾರ್ಯಾಲಯದ ಎದುರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ೧೫೦ ವರ್ಷಗಳ ಇತಿಹಾಸ ಹೊಂದಿದ್ದರೂ, ಶಾಲೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ದೊರಕದಿರುವುದು ವಿಷಾದನೀಯವಾಗಿದೆ ಎಂದು ವಿದ್ಯಾರ್ಥಿ ಪಾಲಕರಾದ ಸಂದೀಪ ಹೇಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭವಾದಾಗಲೆಲ್ಲ ಶಾಲೆಯ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಜಲಾವೃತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೊಂದರೆ ಅನುಭವಿಸುವುದರ ಜೊತೆಗೆ, ಕೊಳಚೆ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಎದುರಾಗಿದೆ. ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದೇ ಆವರಣದಲ್ಲಿ ಅಂಗನವಾಡಿ ಕೇಂದ್ರವೂ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕ ಮಕ್ಕಳು ಮಳೆ ನೀರನ್ನು ದಾಟಿಕೊಂಡೇ ಕೇಂದ್ರಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಜಾರಿ ಬಿದ್ದು ಗಾಯಗೊಂಡರೆ ಅಥವಾ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಎಂದು ನಾಗರಿಕರಾದ ಆನಂದ ಗಾಡವಿ ಪ್ರಶ್ನಿಸಿದ್ದಾರೆ.
ಶಾಲೆಯ ಆವರಣದಲ್ಲಿನ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ, ಆವರಣ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಹಲವು ಬಾರಿ ಒತ್ತಾಯಿಸಲಾಗಿದೆ. ಆದರೂ ಸಮಸ್ಯೆ ಮುಂದುವರಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
೧೫೦ ವರ್ಷಗಳ ಶೈಕ್ಷಣಿಕ ಪರಂಪರೆ ಹೊಂದಿರುವ ಶಾಲೆಯನ್ನು ನಿರ್ಲಕ್ಷಿಸದೆ, ಸಂಬಂಧಪಟ್ಟ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಹಾಗೂ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಬೇಕು. ಮಳೆ ನೀರು ನಿಲ್ಲದಂತೆ ಶಾಶ್ವತ ಚರಂಡಿ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಪಾಲಕರು ಹಾಗೂ ಸಾರ್ವಜನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.