ವಿಜಯಪುರ: ಮುಂದಿನ ತಿಂಗಳಲ್ಲಿ ಶುಭ ಮುಹೂರ್ತ ನೋಡಿಕೊಂಡು ಹೊಸ ರಾಜಕೀಯ ಚಟುವಟಿಕೆ ಆರಂಭಿಸುವುದಾಗಿ ವಿಜಯಪುರ ಶಾಸಕ Basanagouda Patil Yatnal ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳಲ್ಲಿ ಸೂಕ್ತ ಸಮಯದಲ್ಲಿ ಹೊಸ ರಾಜಕೀಯ ಅಭಿಯಾನ ಆರಂಭಿಸುತ್ತೇನೆ. ಜಿಲ್ಲಾವಾರು ಹಿಂದುತ್ವ ಸಭೆಗಳನ್ನು ನಡೆಸುತ್ತೇನೆ. ಕೋಲಾರ ಜಿಲ್ಲೆಯ ಐತಿಹಾಸಿಕ ವಿಘ್ನೇಶ್ವರ ದೇವಸ್ಥಾನದಿಂದ ಈ ಸಭೆಗಳಿಗೆ ಚಾಲನೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಹಿಂದುತ್ವ, ನಿರುದ್ಯೋಗ ಮತ್ತು ಅಭಿವೃದ್ಧಿ ಎಂಬ ಮೂರು ಮುಖ್ಯ ಅಂಶಗಳನ್ನು ಮುಂದಿಟ್ಟುಕೊಂಡು ಸಭೆಗಳನ್ನು ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ರಚನೆ ಕುರಿತಂತೆ ಜನರ ಅಭಿಪ್ರಾಯ ಸಂಗ್ರಹಿಸುವೆ. ಪ್ರಾದೇಶಿಕ ಪಕ್ಷದ ಚಿಂತನೆ ಈಗಾಗಲೇ ಆರಂಭವಾಗಿದೆ. ಮೇ ತಿಂಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
ಮೊದಲು ಜಿಲ್ಲಾ ಕೇಂದ್ರಗಳಲ್ಲಿ, ನಂತರ ತಾಲೂಕು ಕೇಂದ್ರಗಳಲ್ಲಿ ಪ್ರವಾಸ ಮಾಡುತ್ತೇನೆ. ಹಿಂದುಪರ ಚಿಂತನೆ ಹೊಂದಿರುವವರು, ನಿರುದ್ಯೋಗಿ ಯುವಕರು ಹಾಗೂ ಅಭಿವೃದ್ಧಿ ಪರ ಜನರೊಂದಿಗೆ ಸಭೆ ನಡೆಸುತ್ತೇನೆ. ಜನರ ಅಭಿಪ್ರಾಯ ಆಧರಿಸಿ ಮುಂದಿನ ಹಂತದಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ. ಚುನಾವಣಾ ಆಯೋಗ ಯಾವ ಚಿಹ್ನೆ ನೀಡುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ ಎಂದು ಹೇಳಿದ್ದಾರೆ.