ಬೆಂಗಳೂರು: ಮರ್ಮಾಂಗ ಶಸ್ತ್ರಚಿಕಿತ್ಸೆ ಬಳಿಕ ಹೊಲಿಗೆ ಹಾಕದೆ ರೋಗಿಯನ್ನು ಮನೆಗೆ ಕಳುಹಿಸಿದ ಆರೋಪದ ನಡುವೆ ಶಾ ನವಾಜ್ ಸಾವನ್ನಪ್ಪಿರುವ ಘಟನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಹೊಲಿಗೆ ಹಾಕದೆ ರೋಗಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತೀವ್ರ ನೋವು ತಾಳಲಾರದೆ ರಸ್ತೆ ಮಧ್ಯೆ ನರಳಿ ರೋಗಿ ಸಾವನ್ನಪ್ಪಿದ್ದಾರೆ. ಶಾ ನವಾಜ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾ ನವಾಜ್ (45) ಅವರಿಗೆ ಮರ್ಮಾಂಗದಲ್ಲಿ ಗಡ್ಡೆ ಬೆಳೆಯುತ್ತಿದ್ದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅವರು ಕುಟುಂಬದ ಏಕೈಕ ಆಧಾರವಾಗಿದ್ದರು. ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಮರ್ಮಾಂಗದಲ್ಲಿ ಗಡ್ಡೆ ಕಾಣಿಸಿಕೊಂಡ ಹಿನ್ನೆಲೆ ಸುಮಾರು ಒಂದೂವರೆ ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ಇದೆ ಎಂದು ತಿಳಿಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ನಂತರ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಸೂಚಿಸಿದರೂ, ಗಾಯ ವಾಸಿಯಾಗಿಲ್ಲ ಎಂದು ಸಿಬ್ಬಂದಿ ನಿರ್ಲಕ್ಷ್ಯ ತೋರಿದರೆಂಬ ಆರೋಪ ಇದೆ.
ಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗಗಳ ನಡುವಿನ ಸಮನ್ವಯ ಕೊರತೆಯಿಂದಲೇ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಡಿಸ್ಚಾರ್ಜ್ ಮಾಡಲು ಒತ್ತಡ ಹೇರಲಾಗಿದೆ ಎನ್ನಲಾಗಿದೆ. ಕೊನೆಗೆ ಶಸ್ತ್ರಚಿಕಿತ್ಸೆ ಮಾಡಿದ ಭಾಗಕ್ಕೆ ಸರಿಯಾದ ಹೊಲಿಗೆ ಕೂಡ ಹಾಕದೆ ರೋಗಿಯನ್ನು ಕಳುಹಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಾ ನವಾಜ್ ಅವರ ಪತ್ನಿ ಮೂರು ದಿನಗಳ ಕಾಲ ಆಸ್ಪತ್ರೆಗೆ ಸಮೀಪದ ಫುಟ್‌ಪಾತ್‌ನಲ್ಲಿ ರೋಗಿಯನ್ನು ನೋಡಿಕೊಂಡಿದ್ದರು ಎನ್ನಲಾಗಿದೆ. ಎಷ್ಟೇ ವಿನಂತಿಸಿದರೂ ಸಿಬ್ಬಂದಿ ಮರುದಾಖಲು ಮಾಡದೇ ನಿರ್ಲಕ್ಷ್ಯ ತೋರಿದರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಕ್ತಸ್ರಾವ ಮುಂದುವರಿದಿದ್ದರೂ ಚಿಕಿತ್ಸೆ ನೀಡಲಾಗಲಿಲ್ಲ ಎಂಬುದು ಪತ್ನಿಯ ನೋವು.