ಮೈಸೂರು: ಶಾಲೆ-ಕಾಲೇಜುಗಳಿಗೆ ಕೇಸರಿ ಶಾಲು ಅಥವಾ ಹೊಸ ಮಾದರಿಯ ಕೇಸರಿ ಪೇಟ ಧರಿಸಿ ಬರುವುದಕ್ಕೆ ಅವಕಾಶ ಇಲ್ಲ ಎಂದು ಸಿಎಂ Siddaramaiah ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪರಂಪರೆಯಿಂದ ಬಳಕೆಯಲ್ಲಿರುವ ಪೇಟಗಳಿಗೆ ಮಾತ್ರ ಅವಕಾಶ ಇದೆ. ಪೇಟದ ಬಣ್ಣ ಬದಲಿಸಿ ಹೊಸ ರೀತಿಯಲ್ಲಿ ಬಂದರೆ ಅನುಮತಿ ಸಿಗುವುದಿಲ್ಲ ಎಂದು ಹೇಳಿದರು. ಹಿಜಬ್ ಮಾತ್ರವಲ್ಲ, ಜನಿವಾರ, ಶಿವಧಾರ ಹಾಗೂ ಸಂಪ್ರದಾಯಿಕ ಪೇಟಗಳಿಗೂ ಅವಕಾಶ ನೀಡಲಾಗಿದೆ. ಆದರೆ ಹೊಸ ರೀತಿಯ ಧಾರ್ಮಿಕ ಗುರುತುಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದರು. ಇದೇ ವೇಳೆ ಹೈಕಮಾಂಡ್ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಹೈಕಮಾಂಡ್ ಕರೆದಿಲ್ಲ. ಹೀಗಾಗಿ ತಕ್ಷಣ ದೆಹಲಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು. ಮೇ 15ರಂದು ದೆಹಲಿಗೆ ತೆರಳುತ್ತೇನೆ ಎಂದು ಯಾರು ಹೇಳಿದ್ದಾರೆ? ದಿನಾಂಕ ನಿಗದಿ ಮಾಡಿದ್ದು ಯಾರು ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು. ಹೈಕಮಾಂಡ್ ಕರೆಯುವಾಗ ಹೋಗುತ್ತೇನೆ. ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದರೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು. ಮೈಸೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ, ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಕೆಎಸ್‌ಐಸಿ ಸಮೀಪ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಯುಜಿ ಕೇಬಲಿಂಗ್ ಕಾಮಗಾರಿ, ಮಾನಂದವಾಡಿ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ, ಮೆಟ್ರೋಪೋಲ್ ವೃತ್ತದ ಬಳಿ ನಡೆಯುತ್ತಿರುವ ಕೆಎಚ್‌ಬಿ ಮಹಾರಾಣಿ ಕಾಲೇಜು ಕಾಮಗಾರಿ ಹಾಗೂ ಬನ್ನಿಮಂಟಪದ ಹೊಸ ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರು ಸಿಎಂಗೆ ಜೊತೆಯಾದರು.