ಬೆಂಗಳೂರು: ತಮಿಳುನಾಡು ಮತ ಎಣಿಕೆಯಲ್ಲಿ ಟಿವಿಕೆ ಭರ್ಜರಿ ಮುನ್ನಡೆ ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕ ವಿಜಯ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಪರಿಣಾಮವಾಗಿರಬಹುದು ಹಾಗೂ ಹೊಸ ಪಕ್ಷವಾಗಿರುವ ಟಿವಿಕೆ ವಿಜಯ್ ಅಲೆಯ ನೆರವಿನಿಂದ ಮುನ್ನಡೆ ಸಾಧಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ವಿಜಯ್ ಅವರಿಗೆ ಶುಭಾಶಯ ತಿಳಿಸಿದರು. ಉಪಚುನಾವಣೆ ಕುರಿತು ಮಾತನಾಡಿದ ಅವರು, ದಾವಣಗೆರೆಯಲ್ಲಿ ನಮ್ಮ ಮತ ಶೇಕಡಾವಾರು ಕಡಿಮೆಯಾಗುವ ಸಾಧ್ಯತೆ ಇದ್ದರೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಾಗಲಕೋಟೆಯಲ್ಲಿಯೂ ನಾವು ಗೆಲ್ಲುತ್ತೇವೆ ಎಂದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ ಆಡಳಿತ ವಿರೋಧಿ ಅಲೆಯ ಫಲಿತಾಂಶವಾಗಿರಬಹುದು ಎಂದ ಅವರು, ಅಸ್ಸಾಂನಲ್ಲಿ ಸೋಲನ್ನು ಒಪ್ಪಿಕೊಂಡರು. ಕೇರಳದಲ್ಲಿ ನಿರೀಕ್ಷೆ ಮೀರಿ ಮುನ್ನಡೆ ಗಳಿಸಿದ್ದೇವೆ ಎಂದರು.
ತಮಿಳುನಾಡು: ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಮತದಾನ ನಡೆದಿದ್ದು, ಒಟ್ಟು 4,654 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇವರಲ್ಲಿ 3,579 ಪುರುಷರು ಮತ್ತು 443 ಮಹಿಳೆಯರು ಇದ್ದರು. ರಾಜ್ಯದಲ್ಲಿ ಶೇಕಡಾ 84.69 ಮತದಾನ ದಾಖಲಾಗಿದೆ. ಬಹುಮತಕ್ಕೆ 118 ಸ್ಥಾನಗಳ ಅವಶ್ಯಕತೆ ಇತ್ತು. ಈ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ವಿಜಯ್ ನೇತೃತ್ವದ ಟಿವಿಕೆ ಹಾಗೂ ಎನ್‌ಟಿಕೆ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಹಿಂದಿನ ಚುನಾವಣೆಯಲ್ಲಿ ಎಐಎಡಿಎಂಕೆಯ 10 ವರ್ಷದ ಆಡಳಿತಕ್ಕೆ ತೆರೆ ಎಳೆದ ಡಿಎಂಕೆ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿತ್ತು. ಡಿಎಂಕೆ ಮೈತ್ರಿಕೂಟ 159 ಸ್ಥಾನಗಳನ್ನು ಗೆದ್ದಿದ್ದು, ಡಿಎಂಕೆ ಏಕಾಂಗಿಯಾಗಿ 133 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿತ್ತು. ಎಐಎಡಿಎಂಕೆ ಮೈತ್ರಿಕೂಟ 75 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.