ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿರುವ ಬಿಜೆಪಿಯವರಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣಾ ಪ್ರಚಾರ ಉತ್ತಮವಾಗಿ ನಡೆಯುತ್ತಿದ್ದು ನಿರೀಕ್ಷೆಗೂ ಮೀರಿದ ಜನಸ್ಪಂದನೆ ದೊರಕುತ್ತಿದೆ ಎಂದರು. ಎಲ್ಲೆಡೆ ಅಪಾರ ಸ್ಪಂದನೆ ವ್ಯಕ್ತವಾಗುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಯೋಜನೆಗಳು ಬಡಜನರ ಕಲ್ಯಾಣಕ್ಕಾಗಿ ರೂಪಿಸಲಾಗಿದೆ. ಜಾತಿ, ಧರ್ಮ, ಭಾಷೆ ಭೇದವಿಲ್ಲದೆ ಎಲ್ಲರಿಗೂ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದು, ಅವು ಸಾಮಾಜಿಕ ಭದ್ರತೆ ನೀಡುವ ಹೂಡಿಕೆಗಳಾಗಿವೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣವಲ್ಲ; ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದೂ ಅಭಿವೃದ್ಧಿಯ ಭಾಗವೇ ಎಂದು ಹೇಳಿದರು.
ಸಾಮಾಜಿಕ ಯೋಜನೆಗಳನ್ನು ಘೋಷಿಸಿದ ದಿನದಿಂದಲೇ ಬಿಜೆಪಿ ವಿರೋಧಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ರಾಜ್ಯ ಆರ್ಥಿಕವಾಗಿ ದುರ್ಬಲವಾಗುತ್ತದೆ ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ 24/3/2026ರವರೆಗೆ 1.31 ಲಕ್ಷ ಕೋಟಿ ರೂ. ವೆಚ್ಚ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಸಾಲ ಮಾಡಿದ್ದಾರೆ ಎಂದು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯನ್ನು ಬಿಜೆಪಿ ಸರಿಯಾಗಿ ತಿಳಿದುಕೊಳ್ಳಬೇಕು. ಈ ಕಾಯ್ದೆಯ ಪ್ರಕಾರ ಆರ್ಥಿಕ ಕೊರತೆ ಜಿಡಿಪಿಯ 3% ಒಳಗಿರಬೇಕು ಹಾಗೂ ಒಟ್ಟು ಸಾಲ 25% ಮಿತಿಯೊಳಗಿರಬೇಕು. ನಮ್ಮ ರಾಜ್ಯದ ಸಾಲ 24.94% ಇದ್ದು ಮಿತಿಮೀರಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯವು ಆರ್ಥಿಕ ಶಿಸ್ತು ಕಾಪಾಡಿಕೊಂಡಿದೆ. ಕೇಂದ್ರ ಸರ್ಕಾರವೇ ಸಾಲದ ಮಿತಿಯನ್ನು ನಿಗದಿಪಡಿಸುತ್ತದೆ. ಇದನ್ನು ಅರಿಯದೇ ಬಿಜೆಪಿ ತಪ್ಪು ಪ್ರಚಾರ ಮಾಡುತ್ತಿದೆ. ನಾವು ಯಾವುದೇ ಮಾನದಂಡಗಳನ್ನು ಮೀರಿ ಸಾಲ ಮಾಡಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ನ್ನು ಟೀಕಿಸುವ ಬದಲು ಬಿಜೆಪಿ ತನ್ನ ಸಾಧನೆಗಳನ್ನು ಜನರ ಮುಂದೆ ಇಡಲಿ ಎಂದು ಅವರು ಸವಾಲು ಹಾಕಿದರು.
ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಕಡಿತಗೊಳಿಸಿತ್ತು. ಆಹಾರ ಭದ್ರತೆ, ಉದ್ಯೋಗದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳನ್ನು ಜಾರಿಗೆ ತಂದದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರವೇ ಎಂದು ಹೇಳಿದರು.
ಬಿಜೆಪಿಯಿಂದ ಹೊರಗಡಿಸಲ್ಪಟ್ಟ ಶಾಸಕ ಯತ್ನಾಳ್ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಬಿಜೆಪಿ ಹೀನ ಸ್ಥಿತಿಯನ್ನು ತೋರಿಸುತ್ತದೆ. ಸೋಲಿನ ಭಯದಿಂದ ಬಿಜೆಪಿ ಇಂತಹ ಕ್ರಮಗಳಿಗೆ ಮುಂದಾಗಿದೆ. ಪ್ರತಿಪಕ್ಷಗಳ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ; ನಮ್ಮ ಸರ್ಕಾರದ ಕೆಲಸವನ್ನು ಜನರ ಮುಂದೆ ಇಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.