ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಾಯಕತ್ವ ಬದಲಾವಣೆಗೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ Siddaramaiah ಅವರು ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರದ ಪೀಠದಿಂದ ಹಿಂದೆ ಸರಿದಿದ್ದಾರೆ.
ರಾಜೀನಾಮೆ ಘೋಷಣೆಗೆ ಮುನ್ನ ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರೊಂದಿಗೆ ಕೊನೆಯ ಉಪಹಾರ ಸಭೆ ನಡೆಯಿತು. ಸಾಮಾನ್ಯವಾಗಿ ರಾಜಕೀಯ ಚಟುವಟಿಕೆಗಳಿಂದ ಕಂಗೊಳಿಸುವ ಕಾವೇರಿ ನಿವಾಸ ಇಂದು ಮಾತ್ರ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ಸಚಿವರು ಮತ್ತು ಆಪ್ತರು ಸಿದ್ದರಾಮಯ್ಯ ಅವರ ರಾಜಕೀಯ ಪಯಣವನ್ನು ಸ್ಮರಿಸಿ ಕಣ್ಣೀರಿಟ್ಟರು. ಹಲವು ಸಚಿವರು ಭಾವುಕರಾಗಿದ್ದರೆ, ಸಿದ್ದರಾಮಯ್ಯ ಅವರು ಸಹೋದ್ಯೋಗಿಗಳಿಗೆ ಧೈರ್ಯ ತುಂಬಿದರು. ಬಳಿಕ ಮಧ್ಯಾಹ್ನ ರಾಜೀನಾಮೆ ಪತ್ರದೊಂದಿಗೆ ಲೋಕಭವನದತ್ತ ಪ್ರಯಾಣ ಬೆಳೆಸಿದರು.
ರಾಜ್ಯಪಾಲರು ನಗರದಲ್ಲಿ ಇಲ್ಲದ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು.
ಸಂವಿಧಾನಾತ್ಮಕ ಪ್ರಕ್ರಿಯೆಯ ಪ್ರಕಾರ ರಾಜ್ಯಪಾಲರ ಸಹಿ ಬಳಿಕವೇ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಲಿದೆ. ಮೂಲಗಳ ಪ್ರಕಾರ ರಾಜ್ಯಪಾಲರು ನಾಳೆ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದ್ದು, ನಂತರ ಅಂತಿಮ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಈ ಬೆಳವಣಿಗೆಯೊಂದಿಗೆ ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತಕ್ಕೆ ತೆರೆ ಬಿದ್ದಂತಾಗಿದೆ. ಹೈಕಮಾಂಡ್ ಸೂಚನೆ ಹಾಗೂ Rahul Gandhi ಅವರ ಸಂದೇಶಕ್ಕೆ ಗೌರವ ಸೂಚಿಸಿ ಅವರು ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ.