ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನಾಳೆ ಬೆಳಗ್ಗೆ ರಾಜೀನಾಮೆ ಸಲ್ಲಿಸುವುದು ಬಹುತೇಕ ಖಚಿತವಾಗಿದೆ.
ಸಿದ್ದರಾಮಯ್ಯ ಯಾವ ಸಮಯಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ನಾಳೆ ಬೆಳಗ್ಗೆ 11:30ಕ್ಕೆ ಲೋಕಭವನಕ್ಕೆ ತೆರಳಲಿರುವ ಅವರು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ರಾಜೀನಾಮೆಗೂ ಮುನ್ನ ಸಿದ್ದರಾಮಯ್ಯ ಅವರು ತಮ್ಮ ಸಚಿವರು ಹಾಗೂ ಆಪ್ತ ಶಾಸಕರಿಗೆ ಉಪಹಾರ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಈ ಉಪಹಾರ ಸಭೆಯ ಬಳಿಕ ಅವರು ಲೋಕಭವನಕ್ಕೆ ತೆರಳಿ ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಲಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ರಾಜಕೀಯ ಬೆಳವಣಿಗೆಗಳ ಕುರಿತು ಸ್ಪಷ್ಟನೆ ನೀಡಲಿದ್ದಾರೆ ಎನ್ನಲಾಗಿದೆ.
ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 62ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು. ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ದೇಶ ನಿರ್ಮಾಣದಲ್ಲಿ ನೆಹರೂ ಅವರ ಕೊಡುಗೆಯನ್ನು ಸ್ಮರಿಸಿದರು.
ಈ ವೇಳೆ ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ಹಾಗೂ ದೆಹಲಿ ಭೇಟಿಯ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರೂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ರಾಜಕೀಯ ಬೆಳವಣಿಗೆಗಳ ಬಗ್ಗೆ ಮರುಪ್ರಶ್ನೆ ಕೇಳಿದಾಗ, “ನಾಳೆ ಎಲ್ಲದರ ಬಗ್ಗೆ ಮಾತನಾಡುತ್ತೇನೆ” ಎಂದು ಸಂಕ್ಷಿಪ್ತವಾಗಿ ಉತ್ತರಿಸಿದ ಅವರು ಅಲ್ಲಿಂದ ನಿರ್ಗಮಿಸಿದರು.