ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಿದ್ದರಾಮಯ್ಯ (Siddaramaiah) ದೆಹಲಿ ಕಡೆ ಮುಖ ಮಾಡಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ತಕ್ಷಣವೇ ಹೈಕಮಾಂಡ್ ನಾಯಕರ ಭೇಟಿಗಾಗಿ ಅವರು ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಅಚ್ಚರಿ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಸಿದ್ದರಾಮಯ್ಯ ಅವರು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ದೆಹಲಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿ ಪ್ರಮುಖರನ್ನು ಭೇಟಿಯಾಗಿ ಧನ್ಯವಾದ ತಿಳಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ಅವಧಿಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದಕ್ಕಾಗಿ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ ಶಾಸಕಾಂಗ ಪಕ್ಷದ ಸಭೆಯ ದಿನಾಂಕ ಇನ್ನೂ ಘೋಷಣೆಯಾಗದೇ ಇರುವುದರಿಂದ ದೆಹಲಿ ಭೇಟಿಗೆ ಮತ್ತಷ್ಟು ರಾಜಕೀಯ ಮಹತ್ವ ಸಿಕ್ಕಿದೆ. ಸಿದ್ದರಾಮಯ್ಯ ಅವರ ಈ ನಡೆ ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಸರ್ಕಾರದ ಮೇಲೆ ಪ್ರಭಾವ ಉಳಿಸಿಕೊಳ್ಳುವ ಯತ್ನ? ಆಪ್ತರಿಗೆ ಸ್ಥಾನಮಾನ ಫಿಕ್ಸ್?
ಶಾಸಕಾಂಗ ಪಕ್ಷದ ಸಭೆಗೆ ಮುನ್ನವೇ ಸಿದ್ದರಾಮಯ್ಯ ದೆಹಲಿ ಭೇಟಿ ನೀಡಿದರೆ, ಮುಂದಿನ ಸರ್ಕಾರದ ರಚನೆಗೆ ಸಂಬಂಧಿಸಿದ ಮಹತ್ವದ ಚರ್ಚೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಕೇವಲ ಕೃತಜ್ಞತೆ ಸಲ್ಲಿಸುವ ಭೇಟಿಯಷ್ಟೇ ಅಲ್ಲ, ತಮ್ಮ ಆಪ್ತ ಶಾಸಕರು ಮತ್ತು ಸಚಿವರಿಗೆ ಪ್ರಮುಖ ಜವಾಬ್ದಾರಿಗಳು ಸಿಗುವಂತೆ ಲಾಬಿ ನಡೆಸುವ ಸಾಧ್ಯತೆಯೂ ಇದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ. ಮುಂದಿನ ಸರ್ಕಾರದಲ್ಲೂ ತಮ್ಮ ಪ್ರಭಾವ ಮುಂದುವರಿಸಲು ಸಿದ್ದರಾಮಯ್ಯ ಹೊಸ ರಾಜಕೀಯ ತಂತ್ರ ರೂಪಿಸುತ್ತಿದ್ದಾರೆ ಎಂಬ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿವೆ.