ಬಳ್ಳಾರಿ, ಅ.28; ನಗರದ ವಾಣಿಜ್ಯ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಮೀಸಲಾದ ಬೇಸ್ಮೆಂಟ್ಗಳನ್ನು ಇತರ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಸುಗಮ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸಿದ್ದೇಶ ಊಳೂರು ಆಗ್ರಹಿಸಿದ್ದಾರೆ.
ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಬೇಸ್ಮೆಂಟ್ಗಳಲ್ಲಿ ಅಂಗಡಿ, ಗೋಡೌನ್, ಹೋಟೆಲ್ ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವುದರಿಂದ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ, ಪಾದಚಾರಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಟ್ಟಡಗಳ ಅನುಮೋದಿತ ನಕ್ಷೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಗ್ನಿ ಸುರಕ್ಷತೆ, ಮಳೆನೀರು ಕೊಯ್ಲು ಸೇರಿದಂತೆ ಕಡ್ಡಾಯ ಸೌಲಭ್ಯಗಳ ಬಗ್ಗೆಯೂ ತಪಾಸಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಏಳು ದಿನಗಳೊಳಗೆ ವಿಶೇಷ ತಪಾಸಣಾ ತಂಡ ರಚಿಸಿ, ವಾಣಿಜ್ಯ ಕಟ್ಟಡಗಳ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸಿರುವ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ, ಕಾನೂನು ಪ್ರಕಾರ ದಂಡ ವಿಧಿಸಬೇಕು. ಕೈಗೊಂಡ ಕ್ರಮಗಳ ಕುರಿತು ಲಿಖಿತ ಮಾಹಿತಿ ನೀಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಗೋವಿಂದ, ವಿಶ್ವನಾಥ, ಲಿಂಗರೆಡ್ಡಿ, ರಘು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.