ಬಾಗಲಕೋಟೆ : ಅಕ್ಟೋಬರ ೦೮ (ಕರ್ನಾಟಕ ವಾರ್ತೆ) : ವಿಶೇಷ ತೀವ್ರ ಪರಿಷ್‌ರಣೆ (ಎಸ್‌ಐಆರ್) ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಡಿಸಿಟೈಸೇಷನ್ ಪೂರ್ಣಗೊಂಡ ನಂತರ ಮತದಾರರಿಗೆ ‘ನೀಡಲಾದ ನೋಟಿಸ್ ವಿಚಾರಣೆ ಕಾರ್ಯದಲ್ಲಿ ಶೇ.೯೬.೧೫ ರಷ್ಟು ಪ್ರಗತಿ ಸಾಧಿಸಲಾಗಿದ್ದು, ೧೮೨೮ ನೋಟಿಸ್‌ಗಳಿಗೆ ವಿಚಾರಣೆ ಮಾತ್ರ ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯ ಪರಿಷ್ಕರಣೆ, ನೋಟಿಸ್‌ಗಳ ವಿಚಾರಣೆ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಿದರು.
ಆಗಸ್ಟ್ ೧೭ ರಂದು ಡಿಜಿಟೈಜೇಸನ್ ಪೂರ್ಣಗೊಂಡ ಬಳಿಕ ಅಸಂಗತಿಗಳು ಹಾಗೂ ಮ್ಯಾಪಿಂಗ್ ಆಗದ ಮತದಾರರಿಗೆ ದಿನಾಂಕ ನಿಗದಿಪಡಿಸಿ, ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಒಟ್ಟು ೪೭,೪೩೦ ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ ೪೫,೬೦೫ ಮತದಾರರ ವಿಚಾರಣೆ ಪೂರ್ಣಗೊಂಡಿದ್ದು, ೧,೮೨೮ ನೋಟಿಸ್‌ಗಳ ವಿಚಾರಣೆ ಬಾಕಿ ಇರುವುದಾಗಿ ತಿಳಿಸಿದರು. ಬಾಕಿ ಇರುವ ವಿಚಾರಣೆಗಳನ್ನು ಶೀಘ್ರ ಪೂರ್ಣಗೊಳಿಸಲು ವಿವಿಧ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮತದಾರರ ನೋಂದಣಾಧಿಕಾರಿಗಳ ಮೂಲಕ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಪಡೆದು, ಮತದಾರರ ವಿವರಗಳನ್ನು ಅಂತಿಮಗೊಳಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೂತ್ ಮಟ್ಟದ ಏಜೆಂಟರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಹಕರಿಸುವಂತೆ ಕೋರಲಾಯಿತು.
ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಜೂನ್ ೧೬ ರಿಂದ ಸೆಪ್ಟೆಂಬರ್ ೨೩ರ ವರೆಗೆ ನಮೂನೆ-೬ಕ್ಕೆ ೧೫,೮೨೭, ನಮೂನೆ-೭ಕ್ಕೆ ೧,೬೫೬ ಹಾಗೂ ನಮೂನೆ-೮ಕ್ಕೆ ೨೦,೮೮೧ ಅರ್ಜಿಗಳು ಸ್ವೀಕೃತಗೊಂಡಿವೆ.
ನಮೂನೆ-೬ರ ೧೫,೮೨೭ ಅರ್ಜಿಗಳ ಪೈಕಿ ೧೫,೧೯೨ ಅರ್ಜಿಗಳನ್ನು ಇ-ರೋಲ್‌ನಲ್ಲಿ ನವೀಕರಿಸಲಾಗಿದ್ದು, ೩೪ ಅರ್ಜಿಗಳು ಬಾಕಿ ಇವೆ. ನಮೂನೆ-೭ರ ೧,೬೫೬ ಅರ್ಜಿಗಳ ಪೈಕಿ ೭೪೯ ಅರ್ಜಿಗಳು ನವೀಕರಣಗೊಂಡು ೧೩ ಬಾಕಿ ಉಳಿದಿವೆ. ನಮೂನೆ-೮ರ ೨೦,೮೮೧ ಅರ್ಜಿಗಳ ಪೈಕಿ ೧೯,೬೩೪ ಅರ್ಜಿಗಳನ್ನು ನವೀಕರಣಗೊಂಡಿದ್ದು, ೫ ಮಾತ್ರ ಬಾಕಿ ಉಳಿದಿವೆ ಎಂದು ತಿಳಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಎ.ಎಸ್.ಡಿ.ಡಿ ಎಂದು ಗುರುತಿಸಲಾದ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸಲು ವಿಶೇಷ ಅಭಿಯಾನ ನಡೆಸುವಂತೆ ನಿರ್ದೇಶಿಸಲಾಗಿದೆ. ನಮೂನೆ-೬ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಘೋಷಣಾ ಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟುಹೋಗಿದ್ದಲ್ಲಿ, ಅಂತಹ ಮತದಾರರು ಹೆಸರು ನೋಂದಾಯಿಸಿಕೊಳ್ಳುವಂತೆ ಹೆಚ್ಚಿನ ಪ್ರಚಾರ ಹಾಗೂ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು.
ಸಭೆಯಲ್ಲಿ ಚುನಾವಣಾ ಶಿರಸ್ತೇದಾರ ಮಹೇಶ ಪಾಂಡವ, ಚುನಾವಣಾ ವಿಷಯ ನಿರ್ವಾಹಕ ರಾಘು ಢವಳಗಿ, ತಾಂತ್ರಿಕ ಸಹಾಯಕ ಸಂತೋಷ ಜೇವರಗಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರಾದ ಕೃಷ್ಣಾ ಪಾಟೀಲ, ಎಂ.ಎಂ.ಮುತ್ತಪ್ಪನವರ, ಪಿ.ಎಂ.ಹಳ್ಳೂರ ಉಪಸ್ಥಿತರಿದ್ದರು.
ಛಾಯಾಚಿತ್ರ ಲಗತ್ತಿಸಿದೆ. ೧ ಮತ್ತು ೨
ಕೆ.ಇ.ಆರ್.ಸಿ ಸಾರ್ವಜನಿಕ ವಿಚಾರಣೆ ಸಭೆ ಸ್ಥಳ ಬದಲಾವಣೆ
ಬಾಗಲಕೋಟೆ : ಅಕ್ಟೋಬರ ೦೮ (ಕರ್ನಾಟಕ ವಾರ್ತೆ) : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆ.ಇ.ಆರ್.ಸಿ.) ಆಗಸ್ಟ ೧೪ ರಂದು ಪ್ರಕಟಿಸಿರುವ ಕರಡು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ವಿದ್ಯುತ್ ಸರಬರಾಜು ನಿಯಮಾವಳಿಗಳು-೨೦೨೬ರ ಕುರಿತು ಸಾರ್ವಜನಿಕ ವಿಚಾರಣಾ ಸಭೆಯನ್ನು ಅಕ್ಟೋಬರ ೯ ರಂದು ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಭಾಗಿದಾರರಿಗಾಗಿ ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿರುವ ಹೆಸ್ಕಾಂ ಕಾರ್ಪೊರೇಟ್ ಕಚೇರಿ, ವಿದ್ಯುತ್ ಭವನದಲ್ಲಿ ನಿಗದಿಯಾಗಿದ್ದ ಸಾರ್ವಜನಿಕ ವಿಚಾರಣಾ ಸಭೆಯ ಸ್ಥಳವನ್ನು ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಿದೆ. ಇದೀಗ ಸಾರ್ವಜನಿಕ ವಿಚಾರಣಾ ಸಭೆಯು ಹುಬ್ಬಳ್ಳಿಯ ಗೋಪನಕೊಪ್ಪದ ಹೆಸ್ಕಾಂ ನಿಗಮ ಕಚೇರಿ ವಿದ್ಯುತ್ ಭವನದ ಎದುರಿನ ಕೆಪಿಟಿಸಿಎಲ್ ಸಭಾಭವನದಲ್ಲಿ ನಡೆಯಲಿದೆ.
ಕರಡು ವಿದ್ಯುತ್ ಸರಬರಾಜು ನಿಯಮಾವಳಿಗಳು-೨೦೨೬ರ ಕುರಿತು ಆಸಕ್ತಿ ಹೊಂದಿರುವ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಹಾಗೂ ಸಂಬಂಧಪಟ್ಟ ಭಾಗಿದಾರರು ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ, ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಮೌಖಿಕ ಅಥವಾ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ. ಆದ್ದರಿಂದ ಆಸಕ್ತರು ನಿಗದಿತ ದಿನಾಂಕ ಹಾಗೂ ಸ್ಥಳದಲ್ಲಿ ನಡೆಯುವ ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ, ಕರಡು ನಿಯಮಾವಳಿಗಳ ಕುರಿತು ತಮ್ಮ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಹುಬ್ಬಳ್ಳಿ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.