ರಾಮದುರ್ಗ,ಸೆ,೨೮: ಸಮಾಜದಲ್ಲಿ ಅಹಿಂಸೆಯ ಮಹತ್ವ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸಾಮರಸ್ಯ ಹಾಗೂ ಸಹಬಾಳ್ವೆಯ ತತ್ವಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಸ್ಥಳೀಯ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಬ್ಯಾಂಕ್ ಆಫ್ ಬರೋಡಾ ಶಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಾಂಧಿ ಚಿಂತನೆಗಳ ಪರಿಹಾರ ಎಂಬ ವಿಷಯ ಕುರಿತ ಮುಕ್ತ ಭಾಷಣ ಸ್ಪರ್ಧಾ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಸಂದರ್ಭಗಳಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ಗಾಂಧೀಜಿ ಕುರಿತು ಕೋಮು ಭಾವನೆಗಳನ್ನು ಕೆರಳಿಸುವ ರೀತಿಯ ಹೇಳಿಕೆಗಳು ಕೇಳಿ ಬರುತ್ತಿವೆ ಎಂಬುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ವಿಚಾರಗಳು ಸಮಾಜದಲ್ಲಿ ವಿಭಜನೆಗೆ ಕಾರಣವಾಗದೆ, ಯುವ ಜನರು ಇತಿಹಾಸದ ದಾಖಲೆಗಳು ಮತ್ತು ವಿವಿಧ ದೃಷ್ಟಿಕೋನಗಳ ಆಧಾರದ ಮೇಲೆ ಅರ್ಥಮಾಡಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹ, ಸರಳತೆ ಮತ್ತು ಮಾನವೀಯ ಮೌಲ್ಯಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವುಗಳಲ್ಲ. ಅವು ಸಮಾಜದ ಎಲ್ಲ ವರ್ಗಗಳಿಗೂ ಅನ್ವಯಿಸುವ ಮೌಲ್ಯಗಳಾಗಿವೆ. ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ, ಪ್ರಶ್ನಿಸುವ ಮನೋಭಾವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಮುಕ್ತ ಭಾಷಣ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಸುಲ್ತಾನಪುರ ಮಾತನಾಡಿ, ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧಿ ಅವರ ಆದರ್ಶ ಜೀವನ, ಅಹಿಂಸಾ ತತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಸನ್ನಿವೇಶ ಎದುರಾಗಿರುವುದು ದೌರ್ಭಾಗ್ಯ ಸಂಗತಿ. ಗಾಂಧಿಜಿ ಎಲ್ಲರಿಗೂ ಬೇಕು. ಆದರೆ ಅವರ ಚಿಂತನೆಗಳು ಯಾರಿಗೂ ಬೇಕಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಬ್ಯಾಂಕ್ ಆಪ್ ಬರೋಡಾ ಶಾಖಾ ವ್ಯವಸ್ಥಾಪಕ ಹಣಮಂತ್ರಾಯ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿಜಿ ಬಗೆಗೆ ಮಾತನಾಡುವವರನ್ನು ಇಂದು ಸಮಾಜದಲ್ಲಿ ಕೆಟ್ಟ ದೃಷ್ಟಿಯಲ್ಲಿ ನೋಡುವ ಪ್ರಸಂಗಗಳು ಇಂದು ಎದುರಾಗುತ್ತಿವೆ. ಗಾಂಧಿ ಚಿಂತನೆಗಳು ಮನಸ್ಸನ್ನು ಅರಳಿಸುತ್ತವೆ ವಿನಃ ಕೆರಳಿಸುವುದಿಲ್ಲ ಎಂದು ಹೇಳಿದ ಅವರು, ಸದ್ಯದ ರಾಜಕಾರಣಕ್ಕೆ ಗಾಂಧಿ ಅವರ ಚಿಂತನೆಗಳು ಪ್ರಸ್ತುತ ಎಂದು ಹೇಳಿದರು.
ಮುಕ್ತ ಭಾಷಣ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧೇಡೆಯಿಂದ ಆಗಮಿಸಿದ್ದ ಸುಮಾರು ೮೦ ಕ್ಕೂ ಅಧಿಕ ಸಂಖ್ಯೆ ನಾಗರಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಿದ್ಯಾ ಪ್ರಸಾರಕ ಸಮಿತಿ ಸದಸ್ಯ ಡಾ. ವೈ.ಬಿ. ಕುಲಗೋಡ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಐ. ಛಾಯಪ್ಪಗೋಳ, ಬ್ಯಾಂಕ್ ಸಿಬ್ಬಂದಿ ಶಿವುಕುಮಾರ ವುಡಮುಡಿ ಸೇರಿದಂತೆ ಇತರರು ಇದ್ದರು.
ಪ್ರಾಚಾರ್ಯ ಡಾ.ಪ್ರಕಾಶ ತೆಗ್ಗಿಹಳ್ಳಿ ಸ್ವಾಗತಿಸಿದರು. ಉಪನ್ಯಾಸಕರಾದ ಮೈಲಾರಿ ಸಿದ್ಧಗಿರಿ ನಿರೂಪಿಸಿದರು. ಎಂ.ಬಿ. ಪಾಟೀಲ ವಂದಿಸಿದರು.