ತಾಳಿಕೋಟೆ,ಅ,೧೯ : ಶುಂಭ ಮತ್ತು ನಿಶುಂಭ ಎಂಬ ರಾಕ್ಷಸರ ಅಟ್ಟಹಾಸದಿಂದ ದೇವತೆಗಳು ಸಂಕಷ್ಟಕ್ಕೆ ಸಿಲುಕಿದಾಗ, ಜಗನ್ಮಾತೆ ಶ್ರೀ ದುರ್ಗಾದೇವಿಯ ಮೊರೆ ಹೋಗಿ ರಕ್ಷಣೆಗಾಗಿ ಪ್ರಾರ್ಥಿಸಿದರು. ದೇವತೆಗಳ ಮೊರೆಗೆ ಸ್ಪಂದಿಸಿದ ಆದಿಶಕ್ತಿ ದುರ್ಗಾದೇವಿಯು ರಾಕ್ಷಸರೊಂದಿಗೆ ಭೀಕರ ಯುದ್ಧ ನಡೆಸಿ, ಇಬ್ಬರನ್ನೂ ಸಂಹರಿಸಿ ಲೋಕಕ್ಕೆ ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಿದಳು ಎಂಬ ಪೌರಾಣಿಕ ಕಥೆಯನ್ನು ಖ್ಯಾತ ಪುರಾಣ ಪ್ರವಚನಕಾರರಾದ ಯಾಳಗಿಯ ವೇ|| ಬಸಯ್ಯ ಶಾಸ್ತ್ರಿಗಳು ವಿವರಿಸಿದರು.
ರವಿವಾರರಂದು ಸ್ಥಳೀಯ ಎಸ್.ಕೆ. ನಗರದಲ್ಲಿ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಕುರಿತು ಏರ್ಪಡಿಸಲಾದ ಶ್ರೀದೇವಿಯ ಮಹಾಪುರಾಣದ ೮ ನೇ ದಿನದ ಪುರಾಣದಲ್ಲಿ ವಿವರಿಸಿದ ಅವರು ಶುಂಭ-ನಿಶುಂಭರ ಸಂಹಾರದ ಬಳಿಕ ದೇವಾದಿ ದೇವತೆಗಳೆಲ್ಲರೂ ಶ್ರೀ ದುರ್ಗಾದೇವಿಯ ಸನ್ನಿದಿಗೆ ಆಗಮಿಸಿ ಶ್ರೀ ದೇವಿಯ ಅಪಾರ ಶಕ್ತಿ ಪರಾಕ್ರಮ ಹಾಗೂ ಕರುಣೆಯನ್ನು ಕೊಂಡಾಡಿದರೆಂದರು. ದೇವಿಯ ವಿವಿಧ ರೂಪಗಳು ಮತ್ತು ನಾಮಾವಳಿಗಳನ್ನು ಸ್ಮರಿಸುತ್ತಾ ಜಗನ್ಮಾತೆಯ ಮಹಿಮೆಯನ್ನು ಎಲ್ಲರೂ ಸ್ತುತಿಸಿದರು.
ಸರ್ವ ಮಂಗಳ ಮಾಂಗಲ್ಯ ಸೀವೇ ಸರ್ವಾರ್ಥ ಸಾದಿಕೆ ಶರಣ್ಯೆ ತ್ರೆಂಭೆಕೆ ಗೌರಿ ನಾರಾಯಣಿ ನಮೋಸ್ತುತೆ ಎಂಬ ಸ್ತೋತ್ರದ ಮೂಲಕ ದೇವಿಯ ದಿವ್ಯ ಸ್ವರೂಪವನ್ನು ಸ್ಮರಿಸಿ ಜಗತ್ತಿನ ರಕ್ಷಣೆಗಾಗಿ ದೇವಿಯೂ ಮಾಡಿದ ಮಹಾತ್ ಕಾರ್ಯವನ್ನು ಗುಣಗಾನ ಮಾಡಿದರು.
ಸಾವಿರಾರು ಕಣ್ಣುಗಳಂತೆ ಸರ್ವವನ್ನು ಕಾಣುವ ಶಕ್ತಿ ರೂಪಿಣಿಯೇ ನಾರಾಯಣಿಯೇ ಜಗನ್ಮಾತೆಯೇ ನಿನಗೆ ನಮ್ಮ ನಮನಗಳು ಎಂದು ದೇವತೆಗಳು ಭಕ್ತಿಭಾವದಿಂದ ಪ್ರಾರ್ಥಿಸಿದರು. ದುಷ್ಟ ಶಕ್ತಿಗಳ ಸಂಹಾರ ಮಾಡಿ ದರ್ಮವನ್ನು ಸ್ಥಾಪಿಸುವ ದೇವಿಯ ಮಹಿಮೆಯನ್ನು ಕೊಂಡಾಡಿದರೆಂದು ಹೇಳಿದ ಪುರಾಣಿಕರು ಶ್ರೀ ದೇವಿಯ ಆರಾಧನೆ ಸ್ಮರಣೆ ಮತ್ತು ಸ್ತ್ರೋತ್ರ ಪಠಣಗಳು ಭಕ್ತರಲ್ಲಿ ಆತ್ಮ ವಿಸ್ವಾಸ ಹಾಗೂ ಆದ್ಯಾತ್ಮೀಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬುದನ್ನು ಪುರಾಣಿಕರು ಉಪಸ್ಥಿತ ಭಕ್ತ ಸಮೂಹಕ್ಕೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶರಣೆ ಕಾಶೀಬಾಯಿ ಅವರು ವಹಿಸಿದ್ದರು.
ಅಕ್ಷತಾ ಸಂಗೀತಸೇವೆ ಸಲ್ಲಿಸಿದರು. ನಿವೃತ್ತ ಶಿಕ್ಷಕರಾದ ಎಸ್.ಎನ್. ಬಸಣ್ಣವರ ಹಾಗೂ ಬನ್ನಿ ಮಹಾಂಕಾಳಿ ದೇವಸ್ಥಾನದ ಕಮೀಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ತಿತರಿದ್ದರು.