ಬಳ್ಳಾರಿ, ಅ.15: ವೃತ್ತಿಯ ಒತ್ತಡದ ನಡುವೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ದೈಹಿಕ ಆರೋಗ್ಯದ ಜೊತೆಗೆ ಸ್ನೇಹ, ಸಹಕಾರ ಮತ್ತು ಒಗ್ಗಟ್ಟನ್ನು ವೃದ್ಧಿಸುತ್ತದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಹೇಳಿದರು.
ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ಛಾಯಾಗ್ರಾಹಕರ ವತಿಯಿಂದ ದಸರಾ ಹಬ್ಬದ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಛಾಯಾಗ್ರಾಹಕರು ಸಮಾಜದ ಸ್ಮರಣೀಯ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕ್ರೀಡಾಕೂಟಗಳು ವೃತ್ತಿಪರರ ನಡುವೆ ಆತ್ಮೀಯತೆ ಬೆಳೆಸುವುದರೊಂದಿಗೆ ಸಂಘಟನಾತ್ಮಕ ಒಗ್ಗಟ್ಟಿಗೂ ಸಹಕಾರಿಯಾಗುತ್ತವೆ. ಏಳು ತಂಡಗಳ ಆಟಗಾರರು ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹಾರೈಸಿದರು.
ಅಕ್ಟೋಬರ್ 12, 14 ಮತ್ತು 15ರಂದು ನಡೆಯುವ ಪಂದ್ಯಾವಳಿಯಲ್ಲಿ ಏಳು ತಂಡಗಳು ಭಾಗವಹಿಸುತ್ತಿದ್ದು, ಪ್ರತಿ ಪಂದ್ಯವನ್ನು 10 ಓವರ್ಗಳಿಗೆ ಸೀಮಿತಗೊಳಿಸಲಾಗಿದೆ. ದಿನಕ್ಕೆ ನಾಲ್ಕು ಪಂದ್ಯಗಳನ್ನು ನಡೆಸಲು ಆಯೋಜಕರು ಯೋಜಿಸಿದ್ದಾರೆ.
ಛಾಯಾಗ್ರಾಹಕ ವೀರೇಶ್ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎನ್. ಚಂದ್ರಮೋಹನ್, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ತಾಲೂಕು ಗೌರವಾಧ್ಯಕ್ಷ ಶೇಖ್ ಭಾಷಾ, ಕೆಇಬಿ ವೀರೇಶ್, ಹಿರಿಯ ಛಾಯಾಗ್ರಾಹಕರಾದ ನಾರಾಯಣಸ್ವಾಮಿ, ಸುಭಾನ್, ಶ್ರೀಧರ್, ರವಿಕುಮಾರ್, ಸ್ಪೆಕ್ಟ್ರಮ್ ಲ್ಯಾಬ್ನ ಶ್ಯಾಮ್, ಖಾದರ್, ಚಂದ್, ದುರುಗಣ್ಣ ಬಂಡಿಹಟ್ಟಿ, ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.