ಹೈಲೈಟ್ಸ್:
ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಚರ್ಚೆ ತೀವ್ರ: ಯಾರಿಗೆ ಅವಕಾಶ?
ಸಂಭಾವ್ಯರ ಪಟ್ಟಿಯಲ್ಲಿ ಬಿಕೆ ಹರಿಪ್ರಸಾದ್, ಆರ್.ವಿ. ದೇಶಪಾಂಡೆ ಹೆಸರುಗಳು ಮತ್ತೆ ಚರ್ಚೆಯಲ್ಲಿ
ಕಾರ್ಯಕ್ಷಮತೆ ಆಧಾರದ ಮೇಲೆ ಸಚಿವರಿಗೆ ಕತ್ತರಿ? ಹೊಸ ಮುಖಗಳ ಎಂಟ್ರಿಗೆ ವೇದಿಕೆ ಸಜ್ಜು
ಬೆಂಗಳೂರು : ಕರ್ನಾಟಕ ಕಾಂಗ್ರೆಸ್‌ನಲ್ಲಿ ಮೂರು ಪ್ರಮುಖ ವಿಷಯಗಳ ಸುತ್ತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಂಚರಾಜ್ಯ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಸಿಕ್ಕರೆ, ಸರ್ಕಾರ ರಚನೆಯ ನಂತರ ಈ ಚರ್ಚೆಗಳು ನಿರ್ಣಾಯಕ ಹಂತ ತಲುಪಬಹುದು ಎನ್ನಲಾಗಿದೆ. ಪಕ್ಷದೊಳಗಿನ ಗೊಂದಲಗಳಿಗೆ ಹೈಕಮಾಂಡ್ ಸ್ಪಷ್ಟನೆ ನೀಡಬೇಕು ಎಂದು ನಾಯಕರು ಬಹಿರಂಗವಾಗಿ ಒತ್ತಾಯಿಸುತ್ತಿದ್ದಾರೆ. ಮೇ ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೂರು ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅಧಿಕಾರ ಹಂಚಿಕೆ ಕುರಿತ ಹಳೆಯ ಮಾತುಕತೆಗಳು ಮತ್ತೆ ಮೇಲೇಳುತ್ತಿವೆ. ಮೇ 15ರೊಳಗೆ ಸಿಎಂ ಬದಲಾವಣೆ ಎಂಬ ವದಂತಿ ಒಂದೆಡೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಮತ್ತೊಂದೆಡೆ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತು ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಖಾಲಿ ಇರುವ ಎರಡು ಸಚಿವ ಸ್ಥಾನಗಳು ಯಾವವು ಎಂಬ ಕುತೂಹಲವೂ ಹೆಚ್ಚಾಗಿದೆ.
ಸಕ್ಕರೆ, ಜವಳಿ ಮತ್ತು ಎಪಿಎಂಸಿ ಇಲಾಖೆಯ ಸಚಿವ ಶಿವಾನಂದ ಪಾಟೀಲ್ ತಮ್ಮ ಸ್ಥಾನ ತೊರೆಯಲು ಸಿದ್ಧ ಎಂದು ಬಹಿರಂಗವಾಗಿ ಹೇಳಿರುವುದು ಚರ್ಚೆಗೆ ಇನ್ನಷ್ಟು ತೂಕ ನೀಡಿದೆ. ಹೊಸಬರಿಗೆ ಅವಕಾಶ ನೀಡಲು ತಾನು ಸಿದ್ಧ ಎಂದು ಅವರು ಹೇಳಿರುವುದು, ಸಂಪುಟ ವಿಸ್ತರಣೆ ಸಮೀಪದಲ್ಲೇ ಇದೆ ಎನ್ನುವ ಸೂಚನೆಯಾಗಿ ಕಾಣಲಾಗಿದೆ. ಪ್ರಸ್ತುತ ಸರ್ಕಾರದಲ್ಲಿ ಎರಡು ಸಚಿವ ಸ್ಥಾನಗಳು ಖಾಲಿ ಇದ್ದು, ಒಂದು ಸಹಕಾರ ಇಲಾಖೆಯ ಮಾಜಿ ಸಚಿವ ಕೆಎನ್ ರಾಜಣ್ಣ ಅವರದ್ದು, ಮತ್ತೊಂದು ಯುವಜನ, ಕ್ರೀಡೆ ಹಾಗೂ ಎಸ್‌ಟಿ ಕಲ್ಯಾಣ ಇಲಾಖೆಯ ಮಾಜಿ ಸಚಿವ ಬಿ. ನಾಗೇಂದ್ರ ಅವರದ್ದು.
ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಯಾವ ಮಾನದಂಡ ಅನುಸರಿಸಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸಚಿವರ ಕಾರ್ಯಕ್ಷಮತೆ ವರದಿಗಳು ಹೈಕಮಾಂಡ್ ಬಳಿ ಇದ್ದರೂ, ಅದು ಅಂತಿಮ ನಿರ್ಧಾರಕ್ಕೆ ಏಕೈಕ ಅಂಶವಲ್ಲ ಎಂದು ಹೇಳಲಾಗುತ್ತಿದೆ. ಜಾತಿ ಸಮೀಕರಣ, ಪಕ್ಷದ ನಿಷ್ಠೆ, ಸಂಘಟನೆ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ವಿರೋಧ ಪಕ್ಷದ ವಿರುದ್ಧದ ಆಕ್ರಮಣಶೀಲತೆ ಇತ್ಯಾದಿ ಅಂಶಗಳೂ ಪರಿಗಣನೆಗೆ ಬರಲಿವೆ ಎಂಬ ಚರ್ಚೆ ನಡೆಯುತ್ತಿದೆ.
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕೆಲ ಹಾಲಿ ಸಚಿವರ ಸ್ಥಾನ ಸಂಕಷ್ಟದಲ್ಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
-
ಕೆ.ಎಚ್. ಮುನಿಯಪ್ಪ - ಆಹಾರ ಮತ್ತು ನಾಗರಿಕ ಸರಬರಾಜು
-
ದಿನೇಶ್ ಗುಂಡೂರಾವ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
-
ಶರಣಬಸಪ್ಪ ದರ್ಶನಾಪುರ - ಸಣ್ಣ ಕೈಗಾರಿಕೆ
-
ಎನ್.ಎಸ್. ಭೋಸರಾಜು - ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ
-
ಲಕ್ಷ್ಮೀ ಹೆಬ್ಬಾಳ್ಕರ್ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
-
ಮಧು ಬಂಗಾರಪ್ಪ - ಶಿಕ್ಷಣ
-
ಡಾ. ಎಚ್.ಸಿ. ಮಹದೇವಪ್ಪ - ಸಮಾಜ ಕಲ್ಯಾಣ
-
ಬೈರತಿ ಸುರೇಶ್ - ನಗರಾಭಿವೃದ್ಧಿ
-
ಕೆ. ವೆಂಕಟೇಶ್ - ಪಶುಸಂಗೋಪನೆ
-
ಡಾ. ಎಂಸಿ ಸುಧಾಕರ್ - ಉನ್ನತ ಶಿಕ್ಷಣ
-
ರಹೀಂ ಖಾನ್ - ಪೌರಾಡಳಿತ
-
ಎಸ್.ಎಸ್. ಮಲ್ಲಿಕಾರ್ಜುನ - ತೋಟಗಾರಿಕೆ
-
ಶಿವಾನಂದ ಪಾಟೀಲ್ - ಸಕ್ಕರೆ, ಎಪಿಎಂಸಿ
ಇನ್ನೊಂದೆಡೆ, ಸಂಪುಟಕ್ಕೆ ಹೊಸದಾಗಿ ಸೇರುವ ಸಂಭಾವ್ಯರ ಪಟ್ಟಿಯೂ ಚರ್ಚೆಯಲ್ಲಿ ಇದೆ.
-
ಬಿಕೆ ಹರಿಪ್ರಸಾದ್ (ವಿಧಾನ ಪರಿಷತ್ ಸದಸ್ಯರು, ಎಐಸಿಸಿ ವಿಶೇಷ ಆಹ್ವಾನಿತರು)
-
ರೂಪಾ ಶಶಿಧರ್ (ಕೆಜಿಎಫ್ ಶಾಸಕರು, ಕೆ.ಎಚ್. ಮುನಿಯಪ್ಪ ಪುತ್ರಿ)
-
ಸಲೀಂ ಅಹ್ಮದ್ (ವಿಧಾನ ಪರಿಷತ್ ಸದಸ್ಯರು)
-
ಅನಿಲ್ ಚಿಕ್ಕಮಾದು (ಎಚ್.ಡಿ.ಕೋಟೆ ಶಾಸಕರು)
-
ಯುಟಿ ಖಾದರ್ (ಮಂಗಳೂರು ಶಾಸಕರು, ವಿಧಾನಸಭೆ ಸ್ಪೀಕರ್)
-
ಆರ್.ವಿ. ದೇಶಪಾಂಡೆ (ಹಳಿಯಾಳ ಶಾಸಕರು)
-
ಬೇಳೂರು ಗೋಪಾಲಕೃಷ್ಣ (ಸಾಗರ ಶಾಸಕರು)
-
ಅಶೋಕ್ ಮಹದೇವಪ್ಪ ಪಟ್ಟಣ್ (ರಾಮದುರ್ಗ ಶಾಸಕರು)
-
ಟಿಬಿ ಜಯಚಂದ್ರ (ಶಿರಾ ಶಾಸಕರು, ದೆಹಲಿ ವಿಶೇಷ ಪ್ರತಿನಿಧಿ)
-
ಎಚ್.ಸಿ. ಬಾಲಕೃಷ್ಣ (ಮಾಗಡಿ ಶಾಸಕರು)