ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯಲ್ಲಿ ಎಐಎಡಿಎಂಕೆ (AIADMK) ಪಕ್ಷದ ಎಸ್‌ಪಿ ವೇಲುಮಣಿ ಹಾಗೂ ಸಿ.ವಿ ಷಣ್ಮುಗಂ ಬಣಕ್ಕೆ ಸೇರಿದ ಮೂವರು ಶಾಸಕರು ತಮ್ಮ ಸ್ಥಾನಗಳಿಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಮಧುರಾಂತಕಂ ಕ್ಷೇತ್ರದ ಮರಗತಂ ಕುಮಾರ್‌ವೇಲ್, ಪೆರುಂದುರೈ ಕ್ಷೇತ್ರದ ಜಯಕುಮಾರ್ ಹಾಗೂ ಧಾರಾಪುರಂ ಕ್ಷೇತ್ರದ ಸತ್ಯಭಾಮಾ ಅವರು ವಿಧಾನಸಭೆ ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಹಸ್ತಾಂತರಿಸಿದರು. ಬಳಿಕ ಸಚಿವ ಆಧವ್ ಅರ್ಜುನ್ ಸಮ್ಮುಖದಲ್ಲಿ ಟಿವಿಕೆ (TVK) ಪಕ್ಷಕ್ಕೆ ಸೇರ್ಪಡೆಯಾದರು. ಈ ಬೆಳವಣಿಗೆಯಿಂದ ತಮಿಳುನಾಡು ವಿಧಾನಸಭೆಯಲ್ಲಿ ಖಾಲಿ ಸ್ಥಾನಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಮುಖ್ಯಮಂತ್ರಿ ವಿಜಯ್ ರಾಜೀನಾಮೆಯಿಂದ ತಿರುಚ್ಚಿ ಪೂರ್ವ ಕ್ಷೇತ್ರ ಖಾಲಿಯಾಗಿತ್ತು.
ಇತ್ತೀಚಿನ ವಿಧಾನಸಭಾ ಚುನಾವಣೆಯ ಬಳಿಕ ಎಐಎಡಿಎಂಕೆ ಒಳಗೆ ತೀವ್ರ ಭಿನ್ನಮತ ಸ್ಫೋಟಗೊಂಡಿದ್ದು, ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ವಿರುದ್ಧ ಎಸ್‌ಪಿ ವೇಲುಮಣಿ ಹಾಗೂ ಸಿ.ವಿ ಷಣ್ಮುಗಂ ನೇತೃತ್ವದ ಬಂಡಾಯ ಬಣ ಅಸಮಾಧಾನ ವ್ಯಕ್ತಪಡಿಸಿತ್ತು. ಸುಮಾರು 30 ಶಾಸಕರ ಈ ಗುಂಪು ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಬೆಂಬಲ ಸೂಚಿಸಿತ್ತು. ಇತ್ತೀಚಿನ ವಿಶ್ವಾಸಮತ ಸಂದರ್ಭದಲ್ಲಿ ಪಕ್ಷದ ಅಧಿಕೃತ ವಿಪ್ ಉಲ್ಲಂಘಿಸಿ ವಿಜಯ್ ಸರ್ಕಾರದ ಪರ ಮತ ಚಲಾಯಿಸಿದ್ದರಿಂದ, ಇವರ ವಿರುದ್ಧ ಅನರ್ಹತಾ ಕ್ರಮಕ್ಕೆ ಎಐಎಡಿಎಂಕೆ ನಾಯಕತ್ವ ಸಿದ್ಧತೆ ನಡೆಸಿತ್ತು. ಕಾನೂನು ಸಂಕಷ್ಟ ಎದುರಾಗುವ ಮುನ್ನವೇ ಮೂವರು ಶಾಸಕರು ರಾಜೀನಾಮೆ ನೀಡಿ ಪಕ್ಷ ತೊರೆದಿದ್ದಾರೆ.