ರಾಯಬಾಗ,ಸೆ೨೬ : ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜ್ಞಾನದ ಜೊತೆಗೆ ಲೌಕಿಕ ಜ್ಞಾನವನ್ನು ಪಡೆಯುವುದರಿಂದ ಜಗತ್ತಿನ ಆಗು ಹೋಗುಗಳನ್ನು, ವ್ಯವಹಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಗುವುದೆಂದು ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಮಲಗೌಡಾ ಪಾಟೀಲ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದ್ಯಮ ಶೀಲತೆ, ಮಾರುಕಟ್ಟೆ, ಮಾರಾಟ, ಉತ್ಪನ್ನ ತಯಾರಿಕೆ ಹಾಗೂ ಗ್ರಾಹಕರ ನಿರ್ವಹಣೆಯ ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮಾರ್ಕೆಟ್ ಮೇನಿಯಾ-೨೦೨೬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವ್ಯಾಪಾರ ಮಳಿಗೆಗಳ ಮುಖಾಂತರ ವಿದ್ಯಾರ್ಥಿಗಳು ವಸ್ತುಗಳನ್ನು ಮಾರಾಟ ಮಾಡಿ ವಹಿವಾಟು ಜ್ಞಾನವನ್ನು ಪಡೆಯಬಹುದಾಗಿದೆ ಎಂದರು.
ವಿದ್ಯಾರ್ಥಿಗಳಿಂದ ಒಟ್ಟು ೨೩ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ಆಹಾರ ಉತ್ಪನ್ನಗಳು ಸೃಜನಾತ್ಮಕ ವಸ್ತುಗಳು ಹಾಗೂ ನವೀನ ವ್ಯಾಪಾರ ಕಲ್ಪನೆಗಳನ್ನು ಪ್ರದರ್ಶಿಸಲಾಯಿತು. ಎಲ್ಲಾ ಮಳಿಗೆಗಳಿಂದ ಒಟ್ಟು ರೂ.೫೦,೭೨೭ ಮಾರಾಟವಾಗಿದ್ದು, ಒಟ್ಟು ಮಾರಾಟದ ಆಧಾರದ ಮೇಲೆ ಬಿಹೆಲ್-ಇ-ಬಜಾರ್ ಪಾನಿಪುರಿ ಮಳಿಗೆಯಿಂದ ರೂ.೫,೨೪೦ ಮಾರಾಟದೊಂದಿಗೆ ಪ್ರಥಮ ಸ್ಥಾನ, ಸ್ವಾದ್ ಸ್ಕ್ವಾಡ್ ರೂ. ೪,೩೮೦ ಮಾರಾಟದೊಂದಿಗೆ ದ್ವಿತೀಯ ಹಾಗೂ ರಾಯಾಜಿ ಚಾ ರೂ ೩,೯೮೦ ಮಾರಾಟವಾಗುವ ಮೂಲಕ ತೃತೀಯ ಸ್ಥಾನ ಗಳಿಸಿಕೊಂಡವು.
ವ್ಯಾಪಾರ ಮಳಿಗೆಗಳಲ್ಲಿ “ಮೊಸರಿನ ಮುತ್ತು” ಮಳಿಗೆಗೆ ವಿಶಿಷ್ಟ ಮಳಿಗೆ “ರುಚಿ ಪರಂಪರೆಗೆ” ಮಳಿಗೆಗೆ ಅತ್ಯಂತ ನವೀನ ಉತ್ಪನ್ನ, “ಬುಕ್ಕಡ್ ಬ್ರದರ್ಸ್” ಮಳಿಗೆಗೆ ಅತ್ಯುತ್ತಮ ವ್ಯಾಪಾರ ಕಲ್ಪನೆ ಹಾಗೂ ಬರ್ಸ್ಟ್ ಆಂಡ್ ಬೈಟ್ ಮಳಿಗೆಗೆ ಅತ್ಯುತ್ತಮ ಸ್ವಚ್ಛತಾ ಮಳಿಗೆ ಪ್ರಶಸ್ತಿ ದೊರಕಿದವು.
ಅಧ್ಯಕ್ಷತೆಯನ್ನು ಪ್ರಾರ್ಚಾಯ ಡಾ.ಅರ್.ಕೆ.ಪಾಟೀಲ ವಹಿಸಿದ್ದರು, ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಎಮ್.ಎಮ್.ನಿಶಾನದಾರ, ಡಿ.ಎಲ್.ಮಿರ್ಜೆ, ವಿ.ಪಿ.ಪಾಟೀಲ, ಎಲ್.ಬಿ.ಪಾಟೀಲ, ಎಮ್.ಎಸ್.ಹಂಜೆ, ವಿ.ಎ.ಮಂಡಕಿ, ಎ.ಜಿ.ಉಮದಿ ಹಾಗೂ ವಿದ್ಯಾರ್ಥಿಗಳು, ಪಾಲಕರು ಇದ್ದರು.