ರನ್ನ ಬೆಳಗಲಿ: ಅ.,೨೩., ಜಮಖಂಡಿಯ ರಾಯಲ್ ಪ್ಯಾಲೇಸ್ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಜಿಲ್ಲಾಮಟ್ಟದ ನೆಟ್ಬಾಲ್ ಕ್ರೀಡಾಕೂಟದಲ್ಲಿ ರನ್ನ ಬೆಳಗಲಿಯ ಎಸ್ಜಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿ ಸುಧಾ ಲಾಲಿಬುಡ್ಡಿ ಅವರು ೪೦೦ ಮೀಟರ್ ಓಟ ಹಾಗೂ ತ್ರಿವಿಧ ಜಿಗಿತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿ ಶಿವಾನಂದ ಗುಡ್ಲಾರ್ ಅವರು ೩೦೦೦ ಮೀಟರ್ ಓಟ ಹಾಗೂ ಗುಡ್ಡಗಾಡು ಓಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಶ್ರೀಧರ ಕಪ್ಪಲಗುಡ್ಡಿ ಅವರು ಪೋಲ್ವಾಲ್ಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಿ.ವಿ. ಬರಮನಿ, ಚೇರ್ಮನ್ ಪಿ.ಬಿ. ಪೂಜಾರಿ, ಸಂಘದ ಎಲ್ಲ ಪದಾಧಿಕಾರಿಗಳು, ಕಾಲೇಜಿನ ಪ್ರಾಚಾರ್ಯರಾದ ಪರಶುರಾಮ ನಾಯಕ, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಘವೇಂದ್ರ ನಾಯಕ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಭಿನಂದನೆ ಸಲ್ಲಿಸಿದ್ದಾರೆ.