ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಶನಿವಾರ ವೇದಿಕೆಯಾಗಿದ್ದ ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನ ದೇಶದ ಗಮನ ಸೆಳೆದಿದೆ.
ಹೌದು.. ಕೊಲ್ಕತ್ತಾದ ಹೃದಯ ಭಾಗದಲ್ಲಿರುವ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನವು ಮತ್ತೊಮ್ಮೆ ಬಂಗಾಳ ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭ ಇದೇ ಮೈದಾನದಲ್ಲಿ ನೆರವೇರಿತು.
ಬಹುಕಾಲದಿಂದ ಬಂಗಾಳದ ಅತಿದೊಡ್ಡ ರಾಜಕೀಯ ಸಮಾವೇಶಗಳಿಗೆ ಸಾಕ್ಷಿಯಾಗಿರುವ ಈ ವಿಶಾಲ ಮೈದಾನದಲ್ಲಿ ಭಾರಿ ಜನಸಾಗರ ನೆರೆದಿತ್ತು. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಪ್ರಮಾಣವಚನ ಸಮಾರಂಭವು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದಂತಾಯಿತು. ಇದುವರೆಗೆ ಬಿಜೆಪಿ ಅಧಿಕಾರದ ಕನಸು ಕಂಡಿದ್ದ ರಾಜ್ಯದಲ್ಲಿ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು, ಗಣ್ಯರು, ಸಿನಿತಾರರು ಹಾಗೂ ಎನ್‌ಡಿಎ ಆಡಳಿತದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಬಿಗಿ ಭದ್ರತೆ
ಸಮಾರಂಭದ ಹಿನ್ನೆಲೆಯಲ್ಲಿ ಬ್ರಿಗೇಡ್ ಪೆರೇಡ್ ಮೈದಾನವನ್ನು ಹೈ-ಸಿಕ್ಯೂರಿಟಿ ರಾಜಕೀಯ ವೇದಿಕೆಯಾಗಿ ರೂಪಾಂತರಿಸಲಾಗಿತ್ತು. ಮಳೆಯ ಪರಿಸ್ಥಿತಿಯನ್ನು ಮನಗಂಡು ಭಾರೀ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಸುಮಾರು 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಅತಿಥಿಗಳಿಗಾಗಿ ಸುಮಾರು 10 ಸಾವಿರ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗಿದ್ದು, ಜನರ ಸುಗಮ ಸಂಚಾರಕ್ಕಾಗಿ 20 ಪ್ರತ್ಯೇಕ ಪ್ರವೇಶ ದ್ವಾರಗಳನ್ನು ತೆರೆಯಲಾಗಿತ್ತು.
ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಕೊಲ್ಕತ್ತಾ ನಗರಾದ್ಯಂತ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 4 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸುಮಾರು 900 ಏಕರೆ ವಿಸ್ತೀರ್ಣದ ಮೈದಾನವನ್ನು 30 ವಿಭಾಗಗಳಾಗಿ ವಿಭಜಿಸಿ ಪ್ರತಿಯೊಂದಕ್ಕೂ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಸಿಸಿಟಿವಿ ಕ್ಯಾಮೆರಾಗಳು, ರೂಫ್‌ಟಾಪ್ ಮೇಲ್ವಿಚಾರಣೆ, ಹ್ಯಾಂಡ್‌ಹೆಲ್ಡ್ ಸ್ಕ್ಯಾನರ್‌ಗಳು ಹಾಗೂ ಮೆಟಲ್ ಡಿಟೆಕ್ಟರ್‌ಗಳ ಮೂಲಕ ಭದ್ರತೆಯನ್ನು ಖಚಿತಪಡಿಸಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಲ್ಕತ್ತಾ ಪೊಲೀಸರು ವಿಶೇಷ ಸಂಚಾರ ಮಾರ್ಗಸೂಚಿಯನ್ನೂ ಪ್ರಕಟಿಸಿದ್ದರು. ಮೈದಾನ್, ವಿಕ್ಟೋರಿಯಾ ಮೆಮೋರಿಯಲ್ ಮತ್ತು ಕೇಂದ್ರ ಕೊಲ್ಕತ್ತಾ ಭಾಗಗಳ ಹಲವೆಡೆ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹಾಗೂ ಮಾರ್ಗ ಬದಲಾವಣೆಗಳನ್ನು ಜಾರಿಗೊಳಿಸಲಾಗಿತ್ತು.
ರಾಜಕೀಯ ಬೆಂಬಲಿಗರು ಹಾಗೂ ವಿಐಪಿ ವಾಹನಗಳ ಭಾರಿ ಓಡಾಟದಿಂದ ನಗರದಲ್ಲಿ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿತ್ತು.
ಐತಿಹಾಸಿಕ ಹಿನ್ನೆಲೆ
ಬ್ರಿಗೇಡ್ ಪೆರೇಡ್ ಮೈದಾನವು ಬಂಗಾಳದ ರಾಜಕೀಯ ಮತ್ತು ಸಾರ್ವಜನಿಕ ಬದುಕಿನಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. 1950ರ ದಶಕದಿಂದಲೂ ಈ ಮೈದಾನ ದೇಶದ ಪ್ರಮುಖ ರಾಜಕೀಯ ಸಭೆಗಳು ಮತ್ತು ಅಂತರರಾಷ್ಟ್ರೀಯ ಗಣ್ಯರ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಸೋವಿಯತ್ ನಾಯಕರು ನಿಕಿತಾ ಕ್ರುಶ್ಚೆವ್ ಮತ್ತು ನಿಕೊಲೈ ಬುಲ್ಗಾನಿನ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಹಾಗೂ ವೆನೆಜುವೆಲಾದ ಮಾಜಿ ಅಧ್ಯಕ್ಷ ಹುಗೋ ಚಾವೆಜ್ ಸೇರಿದಂತೆ ಅನೇಕ ಗಣ್ಯರು ಇದೇ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.
ದಶಕಗಳ ಕಾಲ ಈ ಮೈದಾನವು ಸಿಪಿಐ(ಎಂ) ರಾಜಕೀಯ ಪ್ರಭಾವದ ಸಂಕೇತವಾಗಿತ್ತು. 34 ವರ್ಷಗಳ ಎಡಪಂಥೀಯ ಆಡಳಿತ ಅವಧಿಯಲ್ಲಿ ನಡೆದ “ರೆಡ್ ಬ್ರಿಗೇಡ್” ಸಮಾವೇಶಗಳು ಬಂಗಾಳ ರಾಜಕೀಯದ ಪ್ರಮುಖ ಗುರುತಾಗಿದ್ದವು. ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ರಾಜಕೀಯ ಸಮಾವೇಶಗಳಿಗೂ ಇದೇ ಮೈದಾನ ಪ್ರಮುಖ ವೇದಿಕೆಯಾಗಿತ್ತು.
ಈಗ ಬಿಜೆಪಿ ಇದೇ ಮೈದಾನದಲ್ಲಿ ಪ್ರಮಾಣವಚನ ಸಮಾರಂಭ ಆಯೋಜಿಸಿರುವುದು ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ಪ್ರಯತ್ನವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸ್ಥಳದ ಆಯ್ಕೆ ಮೂಲಕ ಬಲವಾದ ರಾಜಕೀಯ ಸಂದೇಶ ರವಾನಿಸುವ ಉದ್ದೇಶ ಸ್ಪಷ್ಟವಾಗುತ್ತದೆ ಎಂದು ವೀಕ್ಷಕರು ಹೇಳಿದ್ದಾರೆ.
ಬಂಗಾಳ ರಾಜಕೀಯದಲ್ಲಿ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಸೇರುವ ಜನಸ್ತೋಮವನ್ನು ಪಕ್ಷದ ಸಂಘಟನಾ ಶಕ್ತಿ ಮತ್ತು ಸಾರ್ವಜನಿಕ ಬೆಂಬಲದ ಪ್ರತೀಕವಾಗಿ ಪರಿಗಣಿಸಲಾಗುತ್ತದೆ ಎಂದು ಸಮಾಜಶಾಸ್ತ್ರಜ್ಞರು ಹಾಗೂ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಬಿಜೆಪಿ ಆಯೋಜಿಸಿದ ಈ ಭಾರಿ ಸಮಾರಂಭವನ್ನು ಕೇವಲ ಪ್ರಮಾಣವಚನ ಕಾರ್ಯಕ್ರಮವೆಂದು ಮಾತ್ರವಲ್ಲ, ಪಶ್ಚಿಮ ಬಂಗಾಳದ ರಾಜಕೀಯ ಪರಿವರ್ತನೆಯ ಘೋಷಣೆಯೆಂದೂ ವಿಶ್ಲೇಷಿಸಲಾಗುತ್ತಿದೆ.