ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿದೇಶಿ ಪ್ರಜೆಗಳು ಅಕ್ರಮವಾಗಿ ಮತ ಚಲಾಯಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮತದಾನ ಆರಂಭವಾದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ಹತ್ತು ಮಂದಿ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಸಲ್ಲಿಸಿದ ವರದಿಯ ಆಧಾರದಲ್ಲಿ ತನಿಖೆ ಆರಂಭಿಸಲಾಗಿದೆ.
ಬಂಧಿತ ವ್ಯಕ್ತಿಗಳ ತೋರು ಬೆರಳುಗಳಲ್ಲಿ ಅಳಿಸಲಾಗದ ಶಾಯಿ ಗುರುತು ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅನುಮಾನ ಮೂಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಮತ ಚಲಾಯಿಸಿದ ಆರೋಪದಡಿ ಒಂಬತ್ತು ಪ್ರಕರಣಗಳಲ್ಲಿ ಹತ್ತು ಮಂದಿ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಚೆನ್ನೈ ಹಾಗೂ ಮಧುರೈ ವಿಮಾನ ನಿಲ್ದಾಣಗಳಲ್ಲಿ ಬಂಧಿಸಲ್ಪಟ್ಟ ಈ ವ್ಯಕ್ತಿಗಳು ಶ್ರೀಲಂಕಾ, ಬ್ರಿಟನ್ ಮತ್ತು ಕೆನಡಾ ಮೂಲದವರಾಗಿದ್ದಾರೆ ಎಂದು ಪೊಲೀಸ್ ವಿಚಾರಣೆಯಲ್ಲಿ ಬಹಿರಂಗವಾಗಿದೆ.
“ಮತದಾನ ಮಾಡಲು ಇವರು ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಬಳಸಿದ್ದರು. ಮತ ಚಲಾಯಿಸಿದ ಬಳಿಕ ತಮ್ಮ ದೇಶಗಳಿಗೆ ತೆರಳಲು ಯತ್ನಿಸಿದಾಗ ಅವರ ಬೆರಳುಗಳ ಮೇಲೆ ಅಳಿಸಲಾಗದ ಶಾಯಿ ಗುರುತು ಪತ್ತೆಯಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಅಪರಾಧ ವಿಭಾಗವು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.