ಚೆನ್ನೈ: ತೀವ್ರ ಕುತೂಹಲ ಹುಟ್ಟಿಸಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಗರಿಗೆದರಿದೆ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದ ದಳಪತಿ ವಿಜಯ್ ನೇತೃತ್ವದ ಟಿವಿಕೆ ಅಚ್ಚರಿಯ ಸಾಧನೆ ಮಾಡಿ ಅತಿದೊಡ್ಡ ಪಕ್ಷವಾಗಿ ಮೂಡಿಬರುತ್ತಿದೆ. ಇಂದು ಬೆಳಿಗ್ಗೆ 10 ಗಂಟೆ ವೇಳೆಗೆ ಟಿವಿಕೆ 101 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತ ಡಿಎಂಕೆ 52 ಹಾಗೂ ಎಐಎಡಿಎಂಕೆ ಮೈತ್ರಿಕೂಟ 79 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದ ಒಂದು ಸ್ಥಾನದಲ್ಲಿ ಇತರರು ಮುನ್ನಡೆ ಹೊಂದಿದ್ದಾರೆ.
ಅಪ್ಪ–ಮಗನಿಗೆ ಹೊಡೆತ
ಡಿಎಂಕೆ ಪಕ್ಷಕ್ಕೆ ಭಾರೀ ಹಿನ್ನಡೆ ಕಂಡುಬರುತ್ತಿದೆ. ಡಿಎಂಕೆಯ ಭದ್ರಕೋಟೆ ಎಂದೇ ಖ್ಯಾತಿಯಾದ ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದಲ್ಲಿ ಉದಯನಿಧಿ ಸ್ಟಾಲಿನ್ ಹಿನ್ನಡೆಯಲ್ಲಿದ್ದು, ಕೊಳತ್ತೂರು ಕ್ಷೇತ್ರದಲ್ಲಿ ಎಂ.ಕೆ ಸ್ಟಾಲಿನ್‌ಗೂ ಟಿವಿಕೆ ಮುನ್ನಡೆ ಸವಾಲು ಎಸೆದಿದೆ. ಹೀಗಾಗಿ ಅಪ್ಪ-ಮಗ ಇಬ್ಬರೂ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇತ್ತ ತಿರುಚಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರಗಳಲ್ಲಿ ನಟ ವಿಜಯ್ ಮುನ್ನಡೆ ಸಾಧಿಸಿರುವುದು ಗಮನ ಸೆಳೆಯುತ್ತಿದೆ.
ಸಮ್ಮಿಶ್ರ ಸರ್ಕಾರದ ಸುಳಿವು?
ತಮಿಳುನಾಡಿನಲ್ಲಿ ಪ್ರಾರಂಭಿಕ ಮತ ಎಣಿಕೆಯೇ ತ್ರಿಕೋನ ರಾಜಕೀಯದ ಚಿತ್ರಣ ನೀಡುತ್ತಿದೆ. ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದರೂ, ಬಹುಮತಕ್ಕೆ ಅಗತ್ಯವಾದ 118 ಸ್ಥಾನಗಳಿಗಿಂತ ಇನ್ನೂ ಕಡಿಮೆ ಇದೆ. ಈಗಾಗಲೇ 100ರ ಗಡಿ ದಾಟಿದರೂ ಸ್ಪಷ್ಟ ಬಹುಮತದತ್ತ ಇನ್ನೂ ಹೆಜ್ಜೆ ಇಡಬೇಕಿದೆ. ಎಐಎಡಿಎಂಕೆ ಎರಡನೇ ಸ್ಥಾನದಲ್ಲಿದ್ದು, ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿದಿರುವುದು ರಾಜಕೀಯ ಸಮೀಕರಣಗಳನ್ನು ಬದಲಾಯಿಸುತ್ತಿದೆ. ಈ ಹಿನ್ನೆಲೆ ಅತಂತ್ರ ಸ್ಥಿತಿ ನಿರ್ಮಾಣವಾಗಿ, ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆಗಳು ಜೋರಾಗಿ ಚರ್ಚೆಯಾಗುತ್ತಿವೆ.