ಮೈಸೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿದ ಸಮಗ್ರ ಯೋಜನಾ ವರದಿ (DPR) ಪೂರ್ಣಗೊಂಡಿದ್ದು, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ.ಶಿವಕುಮಾರ್ ಗುರುವಾರ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮಧ್ಯರಂಗ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಒಪ್ಪಿಗೆ ಸಿಕ್ಕ ತಕ್ಷಣ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಹೇಳಿದರು.
ಮೇಕೆದಾಟು ಯೋಜನೆಗಾಗಿ ಅಗತ್ಯ ಆಡಳಿತಾತ್ಮಕ ಸಿದ್ಧತೆಗಳನ್ನು ಸರ್ಕಾರ ಈಗಾಗಲೇ ಪೂರ್ಣಗೊಳಿಸಿದೆ. ಡಿಪಿಆರ್ ಸಿದ್ಧವಾಗಿದ್ದು, ಯೋಜನೆ ನಿರ್ವಹಣೆಗೆ ಪ್ರತ್ಯೇಕ ಕಚೇರಿಯನ್ನೂ ಆರಂಭಿಸಲಾಗಿದೆ. ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಭೂಮಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರಕ್ಕೆ ವರದಿಯನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ವಿವರಿಸಿದರು.
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ವ್ಯಕ್ತಪಡಿಸುತ್ತಿರುವ ವಿರೋಧದ ಕುರಿತು ಪ್ರತಿಕ್ರಿಯಿಸಿದ ಅವರು, “ಮೇಕೆದಾಟು ಯೋಜನೆಗೆ ವಿರೋಧಿಸುವ ಹಕ್ಕು ತಮಿಳುನಾಡಿಗೆ ಇಲ್ಲ. ಈ ವಿಷಯದ ಅಂತಿಮ ತೀರ್ಮಾನವನ್ನು ಕೇಂದ್ರ ಜಲ ಆಯೋಗವೇ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ” ಎಂದರು.
ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸರ್ಕಾರ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು. “ಭೂ ಗ್ಯಾರಂಟಿ” ಯೋಜನೆಯನ್ನು ಆರನೇ ಗ್ಯಾರಂಟಿಯಾಗಿ ಜಾರಿಗೆ ತಂದಿದ್ದು, ಮನೆ ಮಾಲೀಕರ ಹಾಗೂ ಆಸ್ತಿಯ ಛಾಯಾಚಿತ್ರ ಹೊಂದಿರುವ ದಾಖಲೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಇಂತಹ ಯೋಜನೆಯನ್ನು ಹಿಂದೆ ಯಾವುದೇ ಸರ್ಕಾರ ಜಾರಿಗೆ ತಂದಿರಲಿಲ್ಲ ಎಂದು ಹೇಳಿದರು.
ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.
ಈ ವರ್ಷ ಮಳೆಯ ಕೊರತೆ ಎದುರಾಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮುಂಗಾರು ಕೈಕೊಟ್ಟರೆ ರೈತರ ರಕ್ಷಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಸರ್ಕಾರ ಈಗಾಗಲೇ ಪೂರ್ವ ಸಿದ್ಧತೆ ಮತ್ತು ಚರ್ಚೆ ಆರಂಭಿಸಿದೆ ಎಂದು ತಿಳಿಸಿದರು.
ಚಾಮರಾಜನಗರಕ್ಕೆ ಭೇಟಿ ನೀಡಿದ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, “ಚಾಮರಾಜನಗರ ಐತಿಹಾಸಿಕ ಮತ್ತು ಪವಿತ್ರ ನೆಲ. ಭಕ್ತಿ ಇರುವೆಡೆ ದೇವರಿರುತ್ತಾರೆ” ಎಂದು ಹೇಳಿದರು.