ವಿಜಯಪುರ: ಜಿಲ್ಲೆಯ ಹೊರವಲಯದಲ್ಲಿ ಮಧ್ಯಾಹ್ನದ ವೇಳೆಯೇ ಶೂಟೌಟ್ ಸಂಭವಿಸಿದೆ. ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿದ ಹಂತಕರು ನಿರಂತರವಾಗಿ ಗುಂಡಿನ ದಾಳಿ ಮಾಡಿದ್ದಾರೆ. ಅದಲ್ಲದೆ, ಕಲ್ಲುಗಳಿಂದಲೂ ಮೃತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.
ವಿಜಯಪುರ ನಗರದ ಅಲಿಯಾಬಾದ್ ಬಳಿ ಭೀಕರ ಹತ್ಯೆ ನಡೆದಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕೃಷಿಕನಾಗಿದ್ದ ರಾಜು ಕಡೆ ಅವರು ಥಾರ್ ಕಾರಿನಲ್ಲಿ ನಗರತ್ತ ಬರುತ್ತಿದ್ದ ವೇಳೆ ಹಂತಕರು ಟಿಪ್ಪರ್ ವಾಹನದಿಂದ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ನಂತರ ಕಾರಿನ ಬಾಗಿಲು ತೆರೆಯಲಾಗದ ಕಾರಣ, ಹಂತಕರು ಕಲ್ಲುಗಳನ್ನು ಎಸೆದು ಗಾಜು ಒಡೆದಿದ್ದಾರೆ. ಬಳಿಕ ತೃಪ್ತಿಯಾಗದೆ ಕಾರಿನ ಮೇಲೆಯೇ ಗುಂಡಿನ ಮಳೆಗೈದು ದಾಳಿ ಮುಂದುವರೆಸಿದ್ದಾರೆ.
ಈ ಹತ್ಯೆಗೆ ಮುಂಚೆಯೇ ಸಂಚು ರೂಪಿಸಲಾಗಿದ್ದು, ರಾಜು ಅವರ ದಿನನಿತ್ಯದ ಚಲನವಲನಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ದಾಳಿ ನಡೆಸಲಾಗಿದೆ. ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಅವರು ಒಬ್ಬರೇ ಬರುತ್ತಿರುವುದನ್ನು ಗಮನಿಸಿ ಹಂತಕರು ದಾಳಿ ನಡೆಸಿದ್ದಾರೆ.
ಈ ಘಟನೆಗೆ ಆಸ್ತಿ ವೈಷಮ್ಯವೇ ಮೂಲ ಕಾರಣ ಎಂದು ತಿಳಿದುಬಂದಿದ್ದು, ಈ ಹಿಂದೆ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು.
ಮೃತ ರಾಜು ಅವರ ಪತ್ನಿ ಇಟಾಬಾಯಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದು, ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ.
ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಹಾಗೂ ಎಪಿಎಂಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪೊಲೀಸ್ ತನಿಖೆಯಿಂದ ಹತ್ಯೆಯ ನಿಜಸ್ವರೂಪ ಬಹಿರಂಗವಾಗಲಿದೆ.