ಜಕಾರ್ತಾ: ಇಂಡೋನೇಷ್ಯಾದ (Indonesia) ಜಕಾರ್ತಾ (Jakarta) ಹೊರವಲಯದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 81 ಮಂದಿ ಗಾಯಗೊಂಡಿದ್ದಾರೆ.
ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ (Bekasi) ಸೋಮವಾರ ತಡರಾತ್ರಿ ಪ್ರಯಾಣಿಕ ರೈಲು ಹಾಗೂ ಮತ್ತೊಂದು ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಪಘಾತದ ಸಂದರ್ಭದಲ್ಲಿ ಹಲವಾರು ಪ್ರಯಾಣಿಕರು ರೈಲಿನೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ತಕ್ಷಣ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲಿ ನಿಂತಿತ್ತು. ಇದೇ ವೇಳೆ ಮತ್ತೊಂದು ರೈಲು ವೇಗವಾಗಿ ಬಂದು ನಿಂತಿದ್ದ ಪ್ರಯಾಣಿಕ ರೈಲಿನ ಮಹಿಳೆಯರ ಬೋಗಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ರೈಲು ಬೋಗಿಗಳು ಜಖಂಗೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ ಹಾಗೂ ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಹಲವರು ಬೋಗಿಗಳಲ್ಲಿ ಸಿಲುಕಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯ ಮುಂದುವರಿದಿದೆ.
ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (KNKT) ಈ ಅಪಘಾತದ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದು, ಘಟನೆಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.