ತಮಿಳುನಾಡು (Tamil Nadu) ರಾಜಕೀಯ ಇತಿಹಾಸದಲ್ಲಿ ಸಿನಿತಾರೆಯರು ಆಡಳಿತದ ಹಾದಿ ಹಿಡಿದ ಉದಾಹರಣೆಗಳು ಹಲವಿವೆ. ಎಂ.ಜಿ. ರಾಮಚಂದ್ರನ್, ಜಯಲಲಿತಾ, ಉದಯನಿಧಿ ಸ್ಟಾಲಿನ್ ಹೀಗೆ ಅನೇಕರು ಸಕ್ರಿಯ ರಾಜಕೀಯದಲ್ಲಿ ಪ್ರಭಾವ ಬೀರಿದ್ದಾರೆ. ಈಗ ಅದೇ ದಾರಿಯಲ್ಲಿ ‘ದಳಪತಿ’ ವಿಜಯ್ (Thalapathy Vijay) ತಮ್ಮ ‘ತಮಿಳಗ ವೆಟ್ಟಿ ಕಳಗಂ’ (TVK) ಪಕ್ಷದ ಮೂಲಕ 2026ರ ವಿಧಾನಸಭಾ ಚುನಾವಣೆಯಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಎಂಜಿಆರ್ ನಂತರ ಪಕ್ಷ ಕಟ್ಟಿಕೊಂಡು ಅಧಿಕಾರಕ್ಕೇರಿದ ಮೊದಲ ನಟ ಎಂಬ ವಿಶೇಷ ಸಾಧನೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ನಟ ವಿಜಯ್ ಗೆಲುವಿನ ಕಥೆ ವಿಶಿಷ್ಟವಾಗಿದೆ. ಡಿಎಂಕೆಯಿಂದ ಹೊರಬಂದ ನಂತರ ಎಂ.ಜಿ. ರಾಮಚಂದ್ರನ್ ಅಣ್ಣಾಡಿಎಂಕೆ ಸ್ಥಾಪಿಸಿ ಅಧಿಕಾರಕ್ಕೇರಿದದ್ದು ಇತಿಹಾಸ. ಅದರ ಬಳಿಕ ವಿಜಯಕಾಂತ್, ಕಮಲ್ ಹಾಸನ್ ಮೊದಲಾದ ನಟರು ರಾಜಕೀಯ ಪ್ರವೇಶಿಸಿದರೂ ಅಧಿಕಾರ ಸಿಗಲಿಲ್ಲ. ಆದರೆ ದಶಕಗಳ ಬಳಿಕ ವಿಜಯ್ ತಮ್ಮದೇ ಪಕ್ಷದೊಂದಿಗೆ ಅಧಿಕಾರದ ಗುರಿ ತಲುಪಿದ್ದು ಗಮನಾರ್ಹ. ಜಯಲಲಿತಾ ಅವರು ನಟಿಯಾಗಿದ್ದರೂ, ಅವರು ಮುನ್ನಡೆಸಿದ ಪಕ್ಷವನ್ನು ನಿರ್ಮಿಸಿದ್ದವರು ಎಂಜಿಆರ್. ಈ ಹಿನ್ನೆಲೆಯಲ್ಲಿ ವಿಜಯ್ ಸಾಧನೆ ವಿಭಿನ್ನವಾಗಿ ಕಾಣುತ್ತದೆ. ದಶಕಗಳಿಂದ ಡಿಎಂಕೆ ಮತ್ತು ಅಣ್ಣಾಡಿಎಂಕೆಯ ಪ್ರಾಬಲ್ಯವಿದ್ದ ತಮಿಳುನಾಡಿನಲ್ಲಿ, ಹೊಸ ನಾಯಕತ್ವ ಉದಯವಾಗಿದೆ.
ವಿಜಯ್ ರಾಜಕೀಯ ಪ್ರವೇಶ ಒಂದೇ ದಿನದಲ್ಲಿ ನಡೆದದ್ದು ಅಲ್ಲ. 2009ರಲ್ಲೇ ತಮ್ಮ ಅಭಿಮಾನಿ ಸಂಘಗಳನ್ನು ‘ವಿಜಯ್ ಮಕ್ಕಳ್ ಇಯಕ್ಕಂ’ ಆಗಿ ಪರಿವರ್ತಿಸಿ ಜನಸೇವೆ ಆರಂಭಿಸಿದರು. ಶಿಕ್ಷಣ ಸಹಾಯ, ಸಾಮಾಜಿಕ ಕಾರ್ಯಗಳ ಮೂಲಕ ಜನ ಸಂಪರ್ಕ ಬಲಪಡಿಸಿದರು. ನಂತರ ವಿವಿಧ ಸಂದರ್ಭಗಳಲ್ಲಿ ರಾಜಕೀಯ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ತಮ್ಮ ನಿಲುವು ಸ್ಪಷ್ಟಪಡಿಸಿದರು. 2021ರಲ್ಲಿ ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಸಂಘಟನೆಯ ಶಕ್ತಿಯನ್ನು ಪರೀಕ್ಷಿಸಿದರು.
2024ರಲ್ಲಿ ಅಧಿಕೃತವಾಗಿ ಪಕ್ಷ ಸ್ಥಾಪಿಸಿ 2026ರ ಚುನಾವಣೆಯನ್ನು ಗುರಿಯಾಗಿಸಿಕೊಂಡರು. ಡಿಎಂಕೆ ಮತ್ತು ಅಣ್ಣಾಡಿಎಂಕೆಗೆ ಪರ್ಯಾಯವಾಗುವ ದೃಷ್ಟಿಯಿಂದ ಸಂಘಟನೆಯನ್ನು ಬಲಪಡಿಸಿದರು. ಸಿನಿಮಾ ಕ್ಷೇತ್ರದಿಂದ ದೂರ ಉಳಿಯುವ ನಿರ್ಧಾರದಿಂದ ರಾಜಕೀಯದ ಮೇಲೆ ತಮ್ಮ ಕಾಳಜಿಯನ್ನು ತೋರಿಸಿದರು. ಸವಾಲುಗಳು ಎದುರಾದರೂ, ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ ರೀತಿಯಿಂದ ಜನರಲ್ಲಿ ವಿಶ್ವಾಸ ಮೂಡಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಸಂಘಟನೆ ಬಲಪಡಿಸುವುದು, ಹೊಸ ರೀತಿಯ ಪ್ರಚಾರ, ಮತ್ತು ಪ್ರಮುಖ ಸಾಮಾಜಿಕ ಸಮಸ್ಯೆಗಳ ಮೇಲೆ ಒತ್ತು ನೀಡುವುದರಿಂದ ವಿಜಯ್ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.