ತಾಳಿಕೋಟೆ: ನಗರದ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಬಾಂಧವರ ಶ್ರೀ ನಿಮಿಷಾಂಬಾ ದೇವಿ ಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ರವಿವಾರರಂದು ಘಟಸ್ಥಾಪನೆ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಪೂರ್ವಕವಾಗಿ ನೆರವೇರಿತು.
ನವರಾತ್ರಿ ಉತ್ಸವದ ಆರಂಭದ ಅಂಗವಾಗಿ ಶ್ರೀ ನಿಮಿಷಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಘಟಸ್ಥಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಬಾಂಧವರು ಹಾಗೂ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಘನಶಾಮ ಚವ್ಹಾಣ ಅವರು ಮಾತನಾಡಿ ಘಟಸ್ಥಾಪನೆಯು ನವರಾತ್ರಿ ಆಚರಣೆಯ ಪ್ರಮುಖ ಧಾರ್ಮಿಕ ವಿಧಿಯಾಗಿದ್ದು, ಶಕ್ತಿ ಸ್ವರೂಪಿಣಿ ಆದಿಶಕ್ತಿಯ ಆರಾಧನೆಗೆ ಶುಭಾರಂಭದ ಸಂಕೇತವಾಗಿದೆ ಪ್ರಾಚೀನ ಕಾಲದಿಂದಲೂ ಭಾರತೀಯ ಧಾರ್ಮಿಕ ಸಂಪ್ರದಾಯದಲ್ಲಿ ಕಲಶಕ್ಕೆ ಪವಿತ್ರ ಸ್ಥಾನವಿದೆ. ಕಲಶವನ್ನು ಮಂಗಳ, ಸಮೃದ್ಧಿ, ಸೃಷ್ಟಿ ಹಾಗೂ ದೈವಿಕ ಶಕ್ತಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ನವರಾತ್ರಿಯ ಮೊದಲ ದಿನದಂದು ಶುಭ ಮುಹೂರ್ತದಲ್ಲಿ ಕಲಶ ಸ್ಥಾಪಿಸಿ, ದೇವಿಯ ಆವಾಹನೆ ಮಾಡಿ ಒಂಬತ್ತು ದಿನಗಳ ಕಾಲ ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಮಹಿಷಾಸುರನ ವಿರುದ್ಧ ಆದಿಶಕ್ತಿ ದುರ್ಗಾದೇವಿ ವಿಜಯ ಸಾಧಿಸಿದ ನೆನಪಿನಲ್ಲಿ ನವರಾತ್ರಿ ಹಬ್ಬವನ್ನು ಶಕ್ತಿಯ ಆರಾಧನೆ ಮತ್ತು ಧರ್ಮದ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಘಟಸ್ಥಾಪನೆಯು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಭಕ್ತರಲ್ಲಿ ಶ್ರದ್ಧೆ, ನಂಬಿಕೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಪವಿತ್ರ ಸಂಪ್ರದಾಯವಾಗಿದೆ. ಇಂತಹ ಉತ್ಸವಗಳು ನಮ್ಮ ಪೂರ್ವಜರಿಂದ ಬಂದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಸಮಾಜದ ಬಾಂಧವರಲ್ಲಿ ಒಗ್ಗಟ್ಟು, ಸೌಹಾರ್ದತೆ ಹಾಗೂ ಸಹೋದರತ್ವವನ್ನು ಬಲಪಡಿಸುತ್ತವೆ ನವರಾತ್ರಿ ಉತ್ಸವದ ಅಂಗವಾಗಿ ಮಂದಿರದಲ್ಲಿ ಮುಂದಿನ ದಿನಗಳಲ್ಲಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ನಿಮಿಷಾಂಬಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಆಚಾರ್ಯ ವೇ.ಯಲಗೂರೇಶ, ಜೋಶಿ, ಮಹಿಳಾ ರಾಘು ಚವ್ಹಾಣ, ಸಂತೋಷ ಘಾಯಕವಾಡ, ಪ್ರದೀಪ ಭುಸಾರೆ, ಸಂಜು ಚವ್ಹಾಣ, ಮಹೇಶ ಕರಜಗಾರ, ದೊಂಡಿರಾಮ ಮಿರಜಕರ, ರಮೇಶ ಚವ್ಹಾಣ, ಮಹಿಳಾ ಮಂಡಳದ ಸೀಮಾಬಾಯಿ ಚವ್ಹಾಣ, ಒಳಗೊಂಡು ಸದಸ್ಯರುಗಳು ಹಾಗೂ ಸಮಾಜದ ಮುಖಂಡರು, ಪದಾಧಿಕಾರಿಗಳು, ಯುವಕರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.