ಮುಂಬೈ: ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ನಡೆದ ಬಿಜೆಪಿ ರ‍್ಯಾಲಿಯಿಂದ ಉಂಟಾದ ಭಾರಿ ಸಂಚಾರ ದಟ್ಟಣೆ ಹಿನ್ನೆಲೆ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ವಕೀಲ ಗುಣರತ್ನ ಸದಾವರ್ತೆ ಅವರ ಪುತ್ರಿ ಝೆನ್ ಸದಾವರ್ತೆ ಬುಧವಾರ ವರ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಸಂವಿಧಾನ ತಿದ್ದುಪಡಿ ಮಸೂದೆ ಸೋಲು ಹಿನ್ನೆಲೆ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಆಯೋಜಿಸಿದ್ದ ರ‍್ಯಾಲಿ ವೇಳೆ ಈ ಘಟನೆ ನಡೆದಿದೆ.
ರಸ್ತೆಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದರಿಂದ ಆಕ್ರೋಶಗೊಂಡ ಮಹಿಳೆಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವ ಮಹಾಜನ್ ಅವರನ್ನು ನೇರವಾಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.
“ಸಮೀಪದಲ್ಲಿರುವ ಮೈದಾನದಲ್ಲಿ ರ‍್ಯಾಲಿ ನಡೆಸಬಹುದು, ಯಾಕೆ ರಸ್ತೆಗಳನ್ನೇ ಬಂದ್ ಮಾಡ್ತೀರಾ? ಟ್ರಾಫಿಕ್ ಜಾಮ್ ಆಗುತ್ತಿದೆ, ಇಲ್ಲಿಂದ ಹೋಗಿ” ಎಂದು ಮಹಿಳೆ ಕೂಗಾಡಿದ ದೃಶ್ಯಗಳು ವೈರಲ್ ಆಗಿವೆ.
ಈ ಸಂಬಂಧ ಸಲ್ಲಿಸಿದ ದೂರಿನಲ್ಲಿ ಮಹಿಳೆ ಅವಾಚ್ಯ ಶಬ್ದಗಳನ್ನು ಬಳಸಿ ರ‍್ಯಾಲಿಗೆ ಅಡ್ಡಿಪಡಿಸಿ ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೇಶದ ಸಂವಿಧಾನ, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಅವಮಾನಿಸಲು ಅವಕಾಶ ನೀಡಬಾರದು ಎಂದು ದೂರುದಾರರು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 221, 132, 352, 195 ಹಾಗೂ 353 ಅಡಿಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಲಾಗಿದೆ.
ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಮಹಾಜನ್, ಮಹಿಳೆಯ ಕೋಪ ಸ್ವಲ್ಪ ಮಟ್ಟಿಗೆ ಸಮರ್ಥನೀಯವಾದರೂ, ಬಳಸಿದ ಭಾಷೆ ಅನುಚಿತವಾಗಿದೆ ಎಂದು ಹೇಳಿ, ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು.