ತುಮಕೂರು: ಹೆಂಡತಿ ಮನಬಿಟ್ಟು ಹೋಗಿದ್ದರಿಂದ ಮನನೊಂದ ಅರ್ಚಕನೊಬ್ಬ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕುಣಿಗಲ್ (Kunigal) ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ಶಿವಣ್ಣ (40) ಎಂದು ಗುರುತಿಸಲಾಗಿದೆ. ಅವರ ಮಕ್ಕಳು ಜೀವನ್ (10) ಹಾಗೂ ಪ್ರಾಣೇಶ್ (05) ಕತ್ತು ಹಿಸುಕುವ ಮೂಲಕ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪತ್ನಿ ಕಾವ್ಯ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದ್ದು, ನಂತರ ಪೊಲೀಸರಿಗೆ ದೂರು ನೀಡಿ ಆಕೆಯನ್ನು ಪತ್ತೆಹಚ್ಚಿ ಮನೆಗೆ ಕರೆತರಲಾಗಿತ್ತು. ಆದರೆ ಮನೆಗೆ ಬಂದ ಬಳಿಕ ಕಾವ್ಯ ಮನೆಯಲ್ಲಿದ್ದ ಹಣ ಹಾಗೂ ಒಡವೆಗಳನ್ನು ತೆಗೆದುಕೊಂಡು ಮತ್ತೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಮನನೊಂದು ಶಿವಣ್ಣ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.