ಉದಯಪುರ, ಏಪ್ರಿಲ್ 30: ಚಿಕಿತ್ಸೆ ಫಲಿಸದೆ ಮಗಳು ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ಕುಟುಂಬಸ್ಥರು ಅಳಿಯನನ್ನು ಅಪಹರಿಸಿ ಹತ್ಯೆಗೈದ ಘಟನೆ ಉದಯಪುರದಲ್ಲಿ ವರದಿಯಾಗಿದೆ. ಚೋಖಲಬಾರ ಗ್ರಾಮದ ಪಿಂಟೂಲಾಲ್ ವಡೇರಾ ಅವರ ಪತ್ನಿ ಪರು (25) ಏಪ್ರಿಲ್ 28ರಂದು ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಏಪ್ರಿಲ್ 24ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪುತ್ತಿದ್ದಂತೆ, ಅಂಬಾವಿ ಗ್ರಾಮದ ಆಕೆಯ ತವರು ಮನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿದ ತಕ್ಷಣ ಪಿಂಟೂಲಾಲ್ ಕುಟುಂಬಕ್ಕೆ ಮಾಹಿತಿ ನೀಡಿದ ಬಳಿಕ, ಮಂಗಳವಾರ ಸಂಜೆ ಆಕೆಯ ಸಂಬಂಧಿಕರು ಶಸ್ತ್ರಾಸ್ತ್ರಗಳೊಂದಿಗೆ ಚೋಖಲಬಾರ ಗ್ರಾಮಕ್ಕೆ ದಾಳಿ ನಡೆಸಿದರು. ಅಳಿಯನ ಕುಟುಂಬವೇ ಮಗಳ ಸಾವಿಗೆ ಕಾರಣ ಎಂದು ಆರೋಪಿಸಿದ ಗುಂಪು, ಪಿಂಟೂಲಾಲ್ ಮನೆಯನ್ನು ಧ್ವಂಸಗೊಳಿಸಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿತು. ಗ್ರಾಮಸ್ಥರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದರೂ, ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಜೀವಭಯದಿಂದ ಪಿಂಟೂಲಾಲ್ ಮತ್ತು ಅವರ ಕುಟುಂಬಸ್ಥರು ಸ್ಥಳದಿಂದ ಪರಾರಿಯಾದರು. ಆದರೆ ಮರುದಿನ ಬೆಳಿಗ್ಗೆ ಪತ್ನಿಯ ಸಹೋದರ ಕರಣ್ ತನ್ನ ತಂಡದೊಂದಿಗೆ ಮರಳಿ ಬಂದು, ಬಂದೂಕು ತೋರಿಸಿ ಪಿಂಟೂಲಾಲ್ ಅವರನ್ನು ಸಾರ್ವಜನಿಕರ ಎದುರೇ ಅಪಹರಿಸಿ ಅಂಬಾವಿಗೆ ಕರೆದೊಯ್ದರು.
ಪೊಲೀಸರು ಮಧ್ಯಪ್ರವೇಶಿಸುವ ಮುನ್ನವೇ, 26 ವರ್ಷದ ಪಿಂಟೂಲಾಲ್ ಅವರನ್ನು ಮಹಿಳೆಯ ಕುಟುಂಬಸ್ಥರು ಕ್ರೂರವಾಗಿ ಹತ್ಯೆಗೈದಿದ್ದಾರೆ. ಮಗಳ ಸಾವಿಗೆ ಅಳಿಯನೇ ಕಾರಣ ಎಂಬ ಅನುಮಾನದ ಹಿನ್ನೆಲೆ ನಡೆದ ಈ ಸೇಡಿನ ಹತ್ಯೆ ಇದೀಗ ಗಂಭೀರ ಕಾನೂನು ವಿಚಾರವಾಗಿ ಮಾರ್ಪಟ್ಟಿದೆ.
ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.