ಬೆಂಗಳೂರು: ಪ್ರಿಯಕರನನ್ನು (Lover) ಮನೆಗೆ ಕರೆಸಿಕೊಂಡು ವೆಸ್ಟರ್ನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡುತ್ತೇನೆ ಎಂದು ನಂಬಿಸಿ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ (Byadarahalli Police Station) ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಪ್ರಿಯತಮೆ ಪ್ರೇಮಾಳಿಂದ ಕೊಲೆಯಾದ ಕಿರಣ್ ಪ್ರಕರಣದಲ್ಲಿ ಹೊಸ ಮಾಹಿತಿ ಬೆಳಕಿಗೆ ಬಂದಿದ್ದು, ಪ್ರೇಮಾಳನ್ನು ಅವಾಯ್ಡ್ ಮಾಡಿ ಕಿರಣ್ ಮಾಜಿ ಲವರ್ ಜೊತೆ ಸಂಪರ್ಕದಲ್ಲಿದ್ದ ಎಂಬುದೇ ಕೊಲೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹೌದು. 4 ವರ್ಷಗಳಿಂದ ಪರಿಚಿತಳಾಗಿದ್ದ ಪ್ರೇಮಾ ಜೊತೆ ಕಿರಣ್‌ಗೆ ಕಳೆದ 2 ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಇತ್ತೀಚೆಗೆ ಕಿರಣ್ ಪ್ರೇಮಾಳನ್ನು ದೂರ ಮಾಡತೊಡಗಿದ್ದು, ಮಾಜಿ ಪ್ರಿಯತಮೆಯೊಂದಿಗೆ ಮತ್ತೆ ಸಂಪರ್ಕದಲ್ಲಿದ್ದನಂತೆ. ಇತ್ತೀಚೆಗೆ ಆಕೆಯ ಬರ್ತ್‌ಡೇ ಆಚರಿಸಿ ಫೋಟೋಗಳನ್ನೂ ಹಂಚಿಕೊಂಡಿದ್ದ ಕಿರಣ್ ನಡೆ ಪ್ರೇಮಾಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರದ ಬಗ್ಗೆ ಇಬ್ಬರ ನಡುವೆ ಜಗಳವೂ ನಡೆದಿತ್ತು ಎಂದು ತಿಳಿದುಬಂದಿದೆ. ನಂತರ ಕಿರಣ್ ಪ್ರೇಮಾಳ ನಂಬರ್‌ನ್ನು ಬ್ಲಾಕ್ ಮಾಡಿದ್ದಾನೆ.
ನಂತರ ಬೇರೆ ನಂಬರ್‌ನಿಂದ ಕಿರಣ್‌ಗೆ ಕರೆ ಮಾಡಿದ ಪ್ರೇಮಾ, ನೀನು ಹೇಳಿದ ದಿನವೇ ಮದುವೆ ಆಗೋಣ ಎಂದು ಹೇಳಿದ್ದಾಳೆ ಎನ್ನಲಾಗುತ್ತಿದೆ. ಆದರೆ ಅಷ್ಟರಲ್ಲೇ ಭೀಕರ ಕೊಲೆಗೆ ಪ್ಲ್ಯಾನ್ ರೂಪುಗೊಂಡಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೇವಲ ಎರಡು ದಿನಗಳೊಳಗೆ ಕೊಲೆ ಸಂಚು ರೂಪಿಸಲಾಗಿದ್ದು, ಅದಕ್ಕಾಗಿ ಹ್ಯಾಂಡ್‌ಕಫ್, ಬೆಲ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಿದ್ದಾಳೆ ಎಂಬ ಮಾಹಿತಿ ದೊರಕಿದೆ.
ಸದ್ಯ ಪ್ರಕರಣದ ತನಿಖೆ ಮುಂದುವರೆದಿದ್ದು, ಪ್ರೇಮಾ ಗೂಗಲ್ ನೋಡಿ ಒಬ್ಬಳೇ ಕೊಲೆ ಪ್ಲ್ಯಾನ್ ಮಾಡಿದ್ದಾಳಾ? ಅಥವಾ ಯಾರಾದರೂ ಸಹಾಯ ಮಾಡಿದ್ದಾರೆನಾ? ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.