ಮಂಡ್ಯ: ಕಾವೇರಿ ನದಿಯಲ್ಲಿ (Cauvery River) ಈಜಲು ಇಳಿದಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದೆ. ಮೈಸೂರು ನಗರದ (Mysuru City) ಬೆಳಗೊಳ ಕೈಗಾರಿಕಾ ಪ್ರದೇಶದ ಕೇನ್ಸ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ ಸಂತೆಮರಳಿ ಸಮೀಪದ ತಮರವಾಡಿ ಗ್ರಾಮದ ಮೊಹನ್ ಕುಮಾರ್(21) ಹಾಗೂ ಮೈಸೂರಿನ ಜಯಪುರ ಹೋಬಳಿಯ ಕೆಳಹಳ್ಳಿ ಗ್ರಾಮದ ರವಿಚಂದ್ರ(21) ಮೃತ ದುರ್ದೈವಿಗಳು. ಐಟಿಐ ಪೂರ್ಣಗೊಳಿಸಿದ್ದ ಇಬ್ಬರೂ ಸ್ನೇಹಿತ ವಿಕಾಸ್ ಜೊತೆ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಘಟನೆ ಗಮನಿಸಿದ ವಿಕಾಸ್, ಸಮೀಪದಲ್ಲಿದ್ದ ರೈತರ ಸಹಾಯದಿಂದ ಕೆಆರ್‌ಎಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ವೃತ್ತ ನಿರೀಕ್ಷಕ ವಿವೇಕಾನಂದ, ಪಿಎಸ್‌ಐ ರಮೇಶ್ ಕರ್ಕಿಕಟ್ಟೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಈಜುಗಾರರು ಮತ್ತು ಅಗ್ನಿಶಾಮಕ ದಳದ ನೆರವಿನಿಂದ ಶೋಧ ಕಾರ್ಯ ನಡೆಸಿ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಕುರಿತು ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.