ಕೋಲ್ಕತ್ತಾ: ಮತ ಎಣಿಕೆ ನಡೆಯುತ್ತಿದ್ದ ವೇಳೆ ಗಲಾಟೆಗಳು ವರದಿಯಾಗಿದ್ದು, ಕೂಚ್ ಬೆಹಾರ್‌ನಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರು ಪರಸ್ಪರ ಘರ್ಷಣೆಗೆ ಇಳಿದಿದ್ದಾರೆ. ಅಸನ್ಸೋಲ್ ಎಂಜಿನಿಯರಿಂಗ್ ಕಾಲೇಜಿನ ಎಣಿಕೆ ಕೇಂದ್ರದ ಸುತ್ತಮುತ್ತ ನಡೆದ ಗಲಾಟೆಯಲ್ಲಿ ಕುರ್ಚಿಗಳು ಮತ್ತು ವಾಹನಗಳಿಗೆ ಹಾನಿ ಉಂಟಾಗಿದೆ. ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗುಂಪುಗಳನ್ನು ಚದುರಿಸಲು ಲಾಠಿಚಾರ್ಜ್ ಕೂಡ ನಡೆಸಲಾಗಿದೆ. ಉತ್ತರ 24 ಪರಗಣದ ಬರಾಕ್‌ಪೋರ್‌ನಲ್ಲಿರುವ ರಾಷ್ಟ್ರಗುರು ಸುರೇಂದ್ರನಾಥ ಎಣಿಕೆ ಕೇಂದ್ರದ ಬಳಿಯೂ ಮತ್ತೊಂದು ಉದ್ವಿಗ್ನ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭಾರೀ ಗೆಲುವಿನ ನಿರೀಕ್ಷೆಯಲ್ಲಿ ಇದ್ದು, ಪ್ರಸ್ತುತ ಬಿಜೆಪಿ 190, ಟಿಎಂಸಿ 98 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯದಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ಹೇರಲಾಗಿದೆ.
ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಒಟ್ಟು 2,926 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೊದಲ ಹಂತದ 152 ಕ್ಷೇತ್ರಗಳಲ್ಲಿ 1,487 ಹಾಗೂ ಎರಡನೇ ಹಂತದ 142 ಕ್ಷೇತ್ರಗಳಲ್ಲಿ 1,448 ಮಂದಿ ಕಣಕ್ಕಿಳಿದಿದ್ದರು. ಮೊದಲ ಹಂತದಲ್ಲಿ 93.19% ಮತ್ತು ಎರಡನೇ ಹಂತದಲ್ಲಿ 92.47% ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 148 ಸ್ಥಾನಗಳ ಬಹುಮತ ಅಗತ್ಯವಿತ್ತು. ಈ ಬಾರಿ 385 ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್ ಪಡೆಗಳನ್ನು ನಿಯೋಜಿಸಿದ್ದರೂ ಕೆಲವೆಡೆ ಗೊಂದಲಗಳು ವರದಿಯಾಗಿವೆ. ಚುನಾವಣೆ ನಂತರ ದಕ್ಷಿಣ 24 ಪರಗಣಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆದಿದ್ದು, ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21ರಂದು ಮರು ಮತದಾನ ನಡೆಯಲಿದೆ.
ಹಿಂದಿನ ಚುನಾವಣೆಯಲ್ಲಿ ಟಿಎಂಸಿ 213 (ಕೆಲವೆಡೆ 215 ಎಂದು ದಾಖಲೆ) ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿತ್ತು. ಬಿಜೆಪಿ 77 ಸ್ಥಾನಗಳನ್ನು ಗೆದ್ದು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಇತರರಲ್ಲಿ RSMP ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ತಲಾ ಒಂದು ಸ್ಥಾನ ಗೆದ್ದಿದ್ದರು. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಯಾವುದೇ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.