ತಾಳಿಕೋಟೆ, ಮಳೆ ಕೊರತೆಯಿಂದಾಗಿ ಪಟ್ಟಣದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ನೀರನ್ನು ಅತ್ಯಂತ ಮಿತವಾಗಿ ಹಾಗೂ ಜವಾಬ್ದಾರಿಯಿಂದ ಬಳಸಬೇಕು ಎಂದು ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ ತಿಳಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್ಗಳ ನಿವಾಸಿಗಳು ನೀರನ್ನು ಯಾವುದೇ ಕಾರಣಕ್ಕೂ ಪೋಲು ಮಾಡದಂತೆ ಎಚ್ಚರ ವಹಿಸಬೇಕು. ನಲ್ಲಿಗಳನ್ನು ತೆರೆದು ನೀರನ್ನು ವ್ಯರ್ಥವಾಗಿ ಚರಂಡಿಗೆ ಹರಿಯಲು ಬಿಡಬಾರದು. ವಾಹನಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಬಾರದು. ನೀರಿನ ಗುಮ್ಮಿ, ತೊಟ್ಟಿ ಸೇರಿದಂತೆ ನೀರು ಸಂಗ್ರಹಿಸುವ ಸ್ಥಳಗಳಲ್ಲಿ ನೀರು ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಮೂಲದಿಂದಲೂ ನೀರನ್ನು ವ್ಯರ್ಥ ಮಾಡದೆ, ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕಡ್ಡಾಯ ಒಳಚರಂಡಿ ಸಂಪರ್ಕ ಪಡೆಯಲು ಸೂಚನೆ
ಪಟ್ಟಣದಲ್ಲಿರುವ ಎಲ್ಲ ಮನೆಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಹೋಟೆಲ್ಗಳು ಹಾಗೂ ಇತರೆ ವಾಣಿಜ್ಯ ಮಳಿಗೆಗಳು ಕಡ್ಡಾಯವಾಗಿ ಒಳಚರಂಡಿ (ಯುಜಿಡಿ) ಸಂಪರ್ಕ ಪಡೆದುಕೊಳ್ಳಬೇಕು ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿಂದ ಬಳಕೆಯಾದ ಯಾವುದೇ ನೀರನ್ನು ತೆರೆದ ಚರಂಡಿಗೆ ಬಿಡದೆ, ಕಡ್ಡಾಯವಾಗಿ ಒಳಚರಂಡಿ ವ್ಯವಸ್ಥೆಗೆ ಜೋಡಿಸಬೇಕು. ಸಾರ್ವಜನಿಕರು ಹಾಗೂ ವಾಣಿಜ್ಯೋದ್ಯಮಿಗಳು ಪುರಸಭೆ ಕಚೇರಿಗೆ ಭೇಟಿ ನೀಡಿ ನಿಯಮಿತ ಶುಲ್ಕ ಪಾವತಿಸಿ ಒಳಚರಂಡಿ ಸಂಪರ್ಕ ಪಡೆಯಬೇಕು ಎಂದು ಅವರು ಸೂಚಿಸಿದ್ದಾರೆ.
ಒಳಚರಂಡಿ ಸಂಪರ್ಕ ಪಡೆಯದೆ ನಿಯಮ ಉಲ್ಲಂಘಿಸುವವರ ವಿರುದ್ಧ ಪುರಸಭೆಗಳ ಕಾಯ್ದೆಯನ್ವಯ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ನೀರಿನ ಕೊರತೆಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸುನೀಲ್ ಪಾಟೀಲ ಮನವಿ ಮಾಡಿದ್ದಾರೆ.