ಬೆಂಗಳೂರು: ರಾಜ್ಯಪಾಲರನ್ನು ಭೇಟಿಯಾದ ಬಳಿಕ ಡಿಕೆ ಶಿವಕುಮಾರ್ (DK Shivakumar) ಅಜ್ಜಯ್ಯನ ಮಠಕ್ಕೆ (Ajjaiah Mutt) ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಜ್ಜಯ್ಯ ಡಿಕೆಶಿಗೆ ಕೆಲ ಮಹತ್ವದ ಸಲಹೆಗಳನ್ನು ನೀಡಿದ್ದು, ಜೊತೆಗೆ ಎಚ್ಚರಿಕೆಯ ಮಾತನ್ನೂ ಹೇಳಿದ್ದಾರೆ ಎನ್ನಲಾಗಿದೆ.
ಬುಧವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಭೇಟಿಯ ನಂತರ ನೇರವಾಗಿ ನಾಗರಬಾವಿಯ (Nagarbhavi) ಅಜ್ಜಯ್ಯನ ಶಾಖಾ ಮಠಕ್ಕೆ ಡಿಕೆಶಿ, ಪತ್ನಿ ಉಷಾ ಹಾಗೂ ಡಿಕೆ ಸುರೇಶ್ ಭೇಟಿ ನೀಡಿದರು. ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ವೇಳೆ, ಅಜ್ಜಯ್ಯ “ಅತಿಯಾದ ಸಂಭ್ರಮಾಚರಣೆ ಬೇಡ, ಪ್ರತಿಯೊಂದು ತೀರ್ಮಾನವನ್ನು ಯೋಚಿಸಿ ತೆಗೆದುಕೊಳ್ಳಿ. ಮಳೆಗೆ ಪರಿಹಾರ ಇದೆ, ಆದರೆ ಸಮಯ ಮತ್ತು ಸಂದರ್ಭದ ನಿರ್ಧಾರ ನಿಮ್ಮ ಕೈಯಲ್ಲಿದೆ” ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಮಾತುಗಳು ಡಿಕೆಶಿಗೆ ಸ್ವಲ್ಪ ಆತಂಕ ಉಂಟುಮಾಡಿದವು ಎಂಬ ಮಾಹಿತಿ ಲಭ್ಯವಾಗಿದೆ.
ಜೂನ್ 3ರಂದು ಎರಡು ಶುಭ ಸಮಯಗಳಿದ್ದು, ಯಾವ ವೇಳೆಯಲ್ಲಾದರೂ ಪ್ರಮಾಣವಚನ ಕಾರ್ಯಕ್ರಮ ನಡೆಸಬಹುದು. ಆದರೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಸಮಾರಂಭ ಮಾಡಬೇಕೇ ಬೇಡವೇ ಎಂಬ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅಜ್ಜಯ್ಯ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೂ ಯಾವುದೇ ಹೇಳಿಕೆ ನೀಡದಂತೆ ಡಿಕೆಶಿಗೆ ಸೂಚಿಸಿದ್ದರು. “ಮಾತನಾಡಿದರೆ ಮುತ್ತು ಒಡೆದು ಹೋಗುತ್ತದೆ” ಎಂದು ಹೇಳುವ ಮೂಲಕ ಕೆಲಸಕ್ಕೆ ಅಡ್ಡಿಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದರು.
ದೆಹಲಿ ಪ್ರವಾಸಕ್ಕೂ ಮುನ್ನ ಡಿಸಿಎಂ ಡಿಕೆಶಿ ಒಂದೇ ದಿನ ಎರಡು ಬಾರಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ಆಶೀರ್ವಾದ ಪಡೆದಿದ್ದರು. “ಅಜ್ಜಯ್ಯನ ಅಪ್ಪಣೆ ಇಲ್ಲದೆ ನಾನು ಯಾವುದೇ ಕೆಲಸ ಆರಂಭಿಸುವುದಿಲ್ಲ” ಎಂದು ಡಿಕೆಶಿ ಈ ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದರು.