ಚನ್ನಗಿರಿ (ದಾವಣಗೆರೆ): ಭದ್ರಾ ಬಲದಂಡೆ ಕಾಲುವೆಯಲ್ಲಿ ಈಜಲು ಇಳಿದಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಗುರುವಾರ ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿ ಸಮೀಪ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ವಿವೇಕ್ ಹಾಗೂ ಮಾನಸಿ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ವಿವೇಕ್ ಅವರ ಮೃತದೇಹವನ್ನು ಹೊರತೆಗೆದಿದ್ದು, ಮಾನಸಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪೊಲೀಸರ ಮಾಹಿತಿ ಪ್ರಕಾರ, BIET ಕಾಲೇಜಿನ 10 ವಿದ್ಯಾರ್ಥಿಗಳ ತಂಡ ಬಸವಪಟ್ಟಣದ ದೇವಸ್ಥಾನಕ್ಕೆ ಪ್ರವಾಸಕ್ಕೆ ತೆರಳಿತ್ತು. ನಂತರ ಭದ್ರಾ ಕಾಲುವೆಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಕೆಲವರು ಈಜಲು ಮುಂದಾಗಿದ್ದಾರೆ.
ಈ ವೇಳೆ ಮಾನಸಿ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆಕೆಯನ್ನು ರಕ್ಷಿಸಲು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರಯತ್ನಿಸಿದ್ದಾರೆ. ಆದರೆ ಸರಪಳಿಯ ಕೊನೆಯಲ್ಲಿ ಇದ್ದ ವಿವೇಕ್ ಕೂಡ ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿದ್ದಾರೆ.
ಬಸವಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಇಮ್ತಿಯಾಜ್ ಮಾಹಿತಿ ನೀಡಿದ್ದು, ವಿವೇಕ್ ಅವರ ಮೃತದೇಹ ಪತ್ತೆಯಾಗಿದ್ದು, ಮಾನಸಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.