ಕೊಪ್ಪಳ,ಅ,೦೧: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳು, ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಿಣಿಗೇರಾ ಇವರ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರದಂದು “ವಿಶ್ವ ಹೃದಯ ದಿನಾಚರಣೆ” ಹಾಗೂ “ವಿಶ್ವ ರೇಬೀಸ್ ದಿನಾಚರಣೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳ ತಾಲೂಕಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ ಅವರು ಕಾರ್ಯಕ್ರಮದ ಕುರಿತು ಮಾತನಾಡಿ, “ಒಂದು ಹೃದಯ ಬಡಿತವನ್ನು ಕಳೆದುಕೊಳ್ಳಬೇಡಿ” ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶವು ಹೃದಯದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಹೃದಯವನ್ನು ಸುರಕ್ಷಿತವಾಗಿರಿಸುವ ಕುರಿತು ಮಾಹಿತಿ ನೀಡುವುದಾಗಿದೆ. ವಿಶ್ವಾದ್ಯಂತ ಹೆಚ್ಚುತ್ತಿರುವ ಹೃದಯ ಸಂಬಂಧಿ ಖಾಯಿಲೆಗಳನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ೧೯೯೯ರಲ್ಲಿ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನ ಆರಂಭಿಸಲಾಗಿತ್ತು. ಈ ದಿನದಂದು ಹೃದಯ ರೋಗವನ್ನು ತಡೆಗಟ್ಟುವ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಹೃದಯ ಖಾಯಿಲೆಗಳ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದರಿಂದ ಹೃದಯ ಖಾಯಿಲೆಗಳನ್ನು ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಸಣ್ಣ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರು ತಮ್ಮ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಹೃದಯವು ದೇಹದ ಒಂದು ಪ್ರಮುಖ ಭಾಗವಾಗಿದೆ. ಇದರ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸಬೇಕು. ಕಳಪೆ ಜೀವನಶೈಲಿ, ಒತ್ತಡದಿಂದ ಕಾಯಿಲೆಗಳ ಹೆಚ್ಚಳ, ಹಿರಿಯರು ಹಾಗೂ ಯುವಜನರಲ್ಲಿಯೂ ಸಹ ಕಳಪೆ ಜೀವನಶೈಲಿ ಮತ್ತು ಒತ್ತಡವು ಹೃದಯಾಘಾತಕ್ಕೆ ಕಾರಣವಾಗಿದೆ. ಇಂದಿನ ವೇಗದ ಜೀವನದಲ್ಲಿ ಜನರು ತಮ್ಮ ಆರೋಗ್ಯ ನಿರ್ಲಕ್ಷಿಸುತ್ತಿದ್ದಾರೆ. ಭಾರತದಲ್ಲಿ ಜನರು ಹೃದಯ ಖಾಯಿಲೆಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ನಮ್ಮ ದೇಶದಲ್ಲಿ ಹೃದಯ ಖಾಯಿಲೆಗಳ ಪ್ರಕರಣಗಳು ಹೆಚ್ಚಳವಾಗಿವೆ. ಶನಿವಾರ ಮತ್ತು ಭಾನುವಾರದಂದು ಜನರು ತಮ್ಮ ದಿನನಿತ್ಯದ ಜೀವನದಿಂದ ವಿಮುಖರಾಗುತ್ತಾರೆ. ತಡರಾತ್ರಿ ಪಾರ್ಟಿಗಳು, ಜಂಕ್ ಫುಡ್, ನಿದ್ರೆಯ ಕೊರತೆ ಹಾಗೂ ಮದ್ಯಪಾನವು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸೋಮವಾರ ಬೆಳಗ್ಗೆ ಜನರು ಇದ್ದಕ್ಕಿದ್ದಂತೆ ತಮ್ಮ ಕಾರ್ಯನಿರತ ದಿನಚರಿಗಳಿಗೆ ಮರಳಿದಾಗ, ಈ ಬದಲಾವಣೆಯು ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಈ ವಾರಾಂತ್ಯದ ಪರಿಣಾಮವು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ, ಇದು ಹೃದಯ ರೋಗಿಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಕೊಪ್ಪಳ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ. ಅವರು “ವಿಶ್ವ ರೇಬೀಸ್ ದಿನಾಚರಣೆ” ಯ ಬಗ್ಗೆ ಮಾತನಾಡುತ್ತಾ ನಾಯಿ ಕಡಿತದಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ರೇಬೀಸ್ ಒಂದು ವೈರಸ್ ಸೋಂಕಿತ ಪ್ರಾಣಿಗಳು ಮನುಷ್ಯರಿಗೆ ಕಚ್ಚುವುದರಿಂದ ಹರಡುತ್ತದೆ. ನಾಯಿ/ಯಾವುದೇ ಪ್ರಾಣಿ ಕಡಿತವಾದಲ್ಲಿ ತಕ್ಷಣ ನಿಮ್ಮ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರ/ಸಾರ್ವಜನಿಕ ಆಸ್ಪತ್ರೆ/ಜಿಲ್ಲಾ ಆಸ್ಪತ್ರೆ/ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳಬೇಕು. ನಾಯಿ ಕಡಿತದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ?ಯ ಮಾಡಬಾರದು ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ತಡೆಗಟ್ಟುವ ಲಸಿಕೆ ಮತ್ತು ರೇಬಿಸ್ ಇಮ್ಯುನೊ ಗ್ಲೋಬ್ಯುಲಿನ್ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಆಶಾ ಮೇಲ್ವಿಚಾರಕರು, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿಗಳು, ಪ್ರಾ.ಆ. ಸುರಕ್ಷಾಧಿಕಾರಿಗಳು, ಇತರೆ ಆರೋಗ್ಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದರು.