ಮುಗಳಖೋಡ (೩) “ಸಮಸ್ಯೆ ನಿಮ್ಮದು – ಪರಿಹಾರ ನಮ್ಮದು” ಎಂಬ ಸರಕಾರದ ಘೋಷವಾಕ್ಯದೊಂದಿಗೆ ಕುಡಚಿ ಮತಕ್ಷೇತ್ರದ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಅವರ ಅಧ್ಯಕ್ಷತೆಯಲ್ಲಿ ಹಾಗೂ ರಾಯಬಾಗ ತಾಲೂಕು ಆಡಳಿತದ ಸಹಯೋಗದಲ್ಲಿ ಹಾರೂಗೇರಿ ಪಟ್ಟಣದಲ್ಲಿ ಪ್ರಜಾ ಸೇವೆ ಆಂದೋಲನ ಸಭೆ ನಡೆಯಿತು.
ಸಭೆಯಲ್ಲಿ ಕುಡಚಿ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಹಾಗೂ ರೈತರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಂಬಂಧಿಸಿದ ಇಲಾಖೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮುಗಳಖೋಡ ಪಟ್ಟಣದ ನಿವಾಸಿ ಸದಾಶಿವ ಬಡಿಗೇರ ಅವರು ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ವಿವಿಧ ಸಾರ್ವಜನಿಕ ಸಮಸ್ಯೆಗಳು ಹಾಗೂ ತಮ್ಮ ನೂಂದ ಬದುಕಿಗೆ ಜೀವ ತುಂಬುವ ಕುರಿತು ಮನವಿ ಸಲ್ಲಿಸಿದರು.
ಮುಗಳಖೋಡ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರ ನೇಮಕ, ಅಗತ್ಯ ವೈದ್ಯಕೀಯ ಪರಿಕರಗಳು ಹಾಗೂ ಆಯುಷ್ಯ ಆರೋಗ್ಯ ಕೇಂದ್ರ, ಸರ್ಕಾರಿ ವಿಜ್ಞಾನ ವಿಭಾಗದಲ್ಲಿ ಪದವಿಪೂರ್ವ - ಪದವಿ ಹಾಗೂ ತಾಂತ್ರಿಕ ವಿದ್ಯಾಲಯಗಳನ್ನು ಪ್ರಾರಂಭಿಸುವಂತೆ,ಪುರಾತನ ಸಿದ್ದರಾಯಿ ದೇವಾಲಯ ನವೀಕರಣ,ಐದು ಸಾವಿರ ಜನ ಸೇರುವ ಸಮುದಾಯ ಭವನ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಅವಶ್ಯ ಮೂಲ ಸೌಕರ್ಯ ಕ್ಕಾಗಿ ಮನವಿಯಲ್ಲಿ ಒತ್ತಾಯಿಸಿದರು.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ, ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣದ ಸೌಲಭ್ಯಗಳು ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸದಾಶಿವ ಬಡಿಗೇರ ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ರೈತರು ಉಪಸ್ಥಿತರಿದ್ದರು.