ಬೆಂಗಳೂರು: ರಾಜ್ಯ ಸರ್ಕಾರದ ಸಂಪುಟ ಪುನಾರಚನೆ ಸಂದರ್ಭದಲ್ಲಿ ಎದುರಾಗಿದ್ದ ಭಾರೀ ಅಸಮಾಧಾನ ಶಮನಕ್ಕಾಗಿ ಅತೃಪ್ತರಿಗೆ ಕಾಂಗ್ರೆಸ್ ವರಿಷ್ಠರು ನೀಡಿದ್ದ ಭರವಸೆಯಂತೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ-ಮಾನ ರಾಜ್ಯದ 25ಕ್ಕೂ ಹೆಚ್ಚು ಶಾಸಕರಿಗೆ ಒಲಿಯುವ ಸಮಯ ಸನ್ನಿಹಿತವಾಗಿದೆ.
ಈ ಕುರಿತಂತೆ ಕಾಂಗ್ರೆಸ್ ವರಿಷ್ಠರು ನಿನ್ನೆ ಪ್ರಮುಖ ಶಾಸಕರೊಂದಿಗೆ ‘ಒನ್ ಟು ಒನ್’ ಸಭೆ ನಡೆಸಿದ್ದು, ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ತೀವ್ರಗತಿ ನೀಡಿದೆ, ರಾಜ್ಯದ ಪ್ರದೇಶವಾರು, ಜಾತಿವಾರು ಹಾಗೂ ಅಸಮಾಧಾನಿತರ ಗಮನದಲ್ಲಿಟ್ಟುಕೊಂಡು 25ಕ್ಕೂ ಅಧಿಕ ಹಿರಿಯ ಶಾಸಕರಿಗೆ ಸ್ಥಾನ ನೀಡಲು ತೀರ್ಮಾನಿಸಲಾಗಿದೆ.
ಈ ಪಟ್ಟಿಯಲ್ಲಿ ತುಮಕೂರು ಜಿಲ್ಲೆ ಇಬ್ಬರು ಶಾಸಕರ ಹೆಸರು ಮುಂಚೂಣಿಯಲ್ಲಿರುವುದಾಗಿ ಮೂಲಗಳಿಂದ ತಿಳಿದು ಬಂದಿದ್ದು, ಜಿಲ್ಲೆಯ ಇಬ್ಬರಿಗೆ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಭಾಗ್ಯ ಸಿಗಲಿದೆ.
ಶಾಸಕರ ಜೊತೆ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಪ್ರಮುಖ ಕಾರ್ಯಕರ್ತರಿಗೂ ಸ್ಥಾನ ನೀಡಲು ಚಿಂತಿಸಲಾಗಿದ್ದು, ಸಚಿವ ಸ್ಥಾನ ವಂಚಿತರಾದ ಹಿರಿಯ ನಾಯಕರಿಗೆ ಪ್ರಥಮ ಆಧ್ಯತೆ ನೀಡಲಾಗಿದೆ.
ಮೊದಲ ಹಂತದ ಪಟ್ಟಿ ಸಿದ್ಧಗೊಂಡಿದ್ದು, ಸುಮಾರು 45 ಮಂದಿಯ ಹೆಸರು ಅಂತಿಮಗೊಂಡಿದೆ. ಶನಿವಾರ ಅಥವಾ ಭಾನುವಾರ ಈ ಪಟ್ಟಿಗೆ ಕಾಂಗ್ರೆಸ್ ಹೈಕಮ್ಯಾಂಡ್ ಅಂತಿಮ ಮುದ್ರೆ ಒತ್ತಲಿದೆ ಎಂಬ ಮಾಹಿತಿ ಇದೆ.
ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರು ಹಲವು ಶಾಸಕರೊಂದಿಗೆ ‘ಒನ್ ಟು ಒನ್’ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಮಾದ್ಯಮಗಳೊಂದಿಗೆ ಯಾವುದೇ ಅಧಿಕೃತ ಹುದ್ದೆಯ ಕುರಿತು ಚರ್ಚೆಯಾಗಿಲ್ಲ ಎಂದು ಹೇಳಿ, ಯಾವುದೇ ಗುಟ್ಟು ಬಿಟ್ಟುಕೊಡದೆ ಮಾತನಾಡಿದರು.
ಶಾಸಕರೊಂದಿಗೆ ಸಭೆ ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಮಾಲೋಚನೆ ನಡೆಸಿದರು. ಈಗಾಗಲೇ ಸಿದ್ಧಗೊಂಡಿರುವ ಪಟ್ಟಿಯನ್ನು ಪಕ್ಷದ ವರಿಷ್ಠರ ಅಂಗಳಕ್ಕೆ ಕಳಿಸಲು ತೀರ್ಮಾನಿಸಲಾಗಿದೆ.